ಬೆಂಗಳೂರು, ಏ 02 : ರಾಜ್ಯ ವಿಧಾನಸಭೆಯ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಎಲ್ಲಾ ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಚುರುಕು ಮುಟ್ಟಿದೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಲೇಬೇಕು ಎಂದು ರಣತಂತ್ರ ಹೆಣೆಯುತ್ತಿರುವ ಬಿಜೆಪಿ ನಾಯಕರು ಸಿಎಂ ಪುತ್ರ ಡಾ. ಯತೀಂದ್ರ ಸ್ಪರ್ಧಿಸಲಿರುವ ವರುಣಾ ಕ್ಷೇತ್ರಕ್ಕೆ ತಕ್ಕ ಅಭ್ಯರ್ಥಿಯನ್ನೇ ಆಯ್ಕೆ ಮಾಡಿ ಅಖಾಡಕ್ಕಿಳಿಸಲು ರಣತಂತ್ರ ರೂಪಿಸಿದೆ.
ವರುಣಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಹಾಗೂ ಅವರ ಪುತ್ರನಿಗೆ ಸೆಡ್ಡು ಹೊಡೆದಿರುವ ಬಿಜೆಪಿ, ಸಿಎಂ ಪುತ್ರ ಯತೀಂದ್ರ ವಿರುದ್ಧ ಬಿಎಸ್ ವೈ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಮಾಸ್ಟರ್ ಪ್ಲಾನ್ ನಡೆಸಿದೆ. ಒಂದು ವೇಳೆ ಸಿದ್ದು ಹಾಗೂ ಯಡ್ಡಿ ಪುತ್ರರ ಫೈಟ್ ನಿಜವಾದರೇ ವರುಣಾ ಕ್ಷೇತ್ರ ರಾಜ್ಯದ ಪ್ರತಿಷ್ಠೆಯ ಕಣಗಳಲ್ಲೊಂದಾಗಲಿದೆ. ಈಗಾಗಲೇ ಬಿಎಸ್ ವೈ ಕೂಡಾ ತಮ್ಮ ಪುತ್ರನನ್ನು ಯತೀಂದ್ರ ವಿರುದ್ಧ ಕಣಕ್ಕಿಳಿಸಲು ಉತ್ಸುಕರಾಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ಪಟ್ಟಿಯಲ್ಲಿ ಇದಕ್ಕೆಲ್ಲದಕ್ಕೂ ಉತ್ತರ ಸಿಗಲಿದೆ.