ಮಂಗಳೂರು, ಜೂ.17 (DaijiworldNews/MB) : ದಾಯ್ಜಿವಲ್ಡ್ ಟಿವಿ ವರದಿಗಾರ ಎಂದು ಸುಳ್ಳು ಹೇಳಿಕೊಂಡು ಬೊಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗೆ ವ್ಯಕ್ತಿಯೋರ್ವ ಬೆದರಿಕೆ ಹಾಕಿದ ಘಟನೆ ನಗರದ ಬೊಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಆರೋಪಿಯನ್ನು ಮೂಡುಶೆಡ್ಡೆ ನಿವಾಸಿ ಲಾಯ್ ಜೋಸ್ಸಿ ಮೊಂತೆರೋ ಎಂದು ಗುರುತಿಸಲಾಗಿದೆ.
ಪಾನಮತ್ತನಾಗಿದ್ದ ಆರೋಪಿಯು ದಾಯ್ಜಿವಲ್ಡ್ ಟಿವಿ ವರದಿಗಾರ ಎಂದು ಸುಳ್ಳು ಹೇಳಿಕೊಂಡು ಆಸ್ಪತ್ರೆಯ ಸಿಬ್ಬಂದಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದು ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ಲಾಯ್ ಅವರ ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದು, ವೈದ್ಯಾಧಿಕಾರಿ ಎಂಟು ತಿಂಗಳಲ್ಲಿ ಆರೋಗ್ಯ ಕಾರ್ಡ್ಗೆ ಸಹಿ ಮಾಡುವ ವಿಧಾನವಿದೆ. ಆದರೆ ಲಾಯ್ ಅವರು ದಾಯ್ಜಿವಲ್ಡ್ ಟಿವಿ ವರದಿಗಾರ ಎಂದು ಹೇಳಿಕೊಂಡು ಆರೋಗ್ಯ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಕಾರ್ಡ್ ಗೆ ಮೊದಲೇ ಸಹಿ ಹಾಕಿ ಎಂದು ಒತ್ತಾಯಿಸಿದ್ದಾರೆ. ಇದಲ್ಲದೆ, ‘ಓರ್ವ ವರದಿಗಾರ’ ಕರೆಗೆ ಸಿಬ್ಬಂದಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದಿದ್ದರೆ, ಇನ್ನು ಸಾಮಾನ್ಯ ಜನರಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗಿದೆ.
ಪ್ರಾಥಮಿಕ ಕೇಂದ್ರದಲ್ಲಿ ಇರಬೇಕಾಗಿದ್ದ ವೈದ್ಯರು ಮುಂಜಾನೆ 3 ಗಂಟೆಯವರೆಗೆ ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಹಿನ್ನಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಈ ಕುರಿತಾಗಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕ್ರರಣ ದಾಖಲಿಸಲಾಗಿದೆ.