ಕಾಸರಗೋಡು, ಏ 02 : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಕೇರಳದಲ್ಲಿ ಕಾರ್ಮಿಕ ಸಂಘಟನೆಗಳು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಕಾಸರಗೋಡಿನಲ್ಲೂ ಮುಷ್ಕರದ ಪರಿಣಾಮ ಜನಜೀವನದ ಮೇಲೆ ಬೀರಿದ್ದು, ಕೆ ಎಸ್ ಆರ್ ಟಿಸಿ ಸೇರಿದಂತೆ ಖಾಸಗಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ತೆರೆದಿಲ್ಲ . ಸರಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿದೆ. ಕೆಲವೇ ಕೆಲ ಖಾಸಗಿ ವಾಹನಗಳು ಮಾತ್ರ ರಸ್ತೆಗಿಳಿದಿದ್ದು ಬ್ಯಾಂಕ್, ವಿಮೆ , ಬಿ ಎಸ್ ಎನ್ ಎಲ್ , ಶಿಕ್ಷಕರು ಸೇರಿದಂತೆ ಎಲ್ಲಾ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಬಿ ಎಂ ಎಸ್ ಹೊರತುಪಡಿಸಿ ಉಳಿದೆಲ್ಲಾ ಸಂಘಟನೆಗಳು ಮುಷ್ಕರದಲ್ಲಿ ಭಾಗಿಯಾಗಿದೆ. 24 ಗಂಟೆಗಳ ಮುಷ್ಕರಕ್ಕೆ ಕರೆನೀಡಲಾಗಿದ್ದು , ನಿನ್ನೆ ಮಧ್ಯರಾತ್ರಿಯಿಂದ ಇಂದು ಮಧ್ಯರಾತ್ರಿ ತನಕ ಮುಷ್ಕರ ನಡೆಯಲಿದೆ.ಮುಷ್ಕರದ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ .ಕಾರ್ಮಿಕ ಸಂಘಟನೆಗಳು ಬೆಳಿಗ್ಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು.