ಬಂಟ್ವಾಳ, ಜೂ 17 (DaijiworldNews/SM): ಅಪಘಾತದಲ್ಲಿ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದವರನ್ನು ಮಾನವೀಯ ಧರ್ಮದ ನೆಲೆಯಲ್ಲಿ ಆಸ್ಪತ್ರೆಗೆ ರವಾನಿಸಿ ಯುವಕನೊಬ್ಬ ಆದರ್ಶ ಮೆರೆದ ಕಾರ್ಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ದಾಸಕೋಡಿ ಎಂಬಲ್ಲಿ ನಡೆದಿದೆ.
ಕಲ್ಲಡ್ಕ ನಿವಾಸಿ ಸಂದೇಶ್ ಮಾನವೀಯತೆಯನ್ನು ಮೆರೆದು ಆದರ್ಶರೆನಿಸಿದ ಯುವಕನಾಗಿದ್ದು, ಅವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಾಣಾಪಾಯದಲ್ಲಿರುವ ಜೀವಗಳಿಗೆ ರಕ್ಷಣೆಗೆ ತಾನು ಮುಂದಾಗಿದ್ದೇನೆ. ಅದು ಆ ಸಮಯದಲ್ಲಿ ಧರ್ಮದ ಕಾರ್ಯವಾಗಿತ್ತು ಎಂದು ಸಂದೇಶ್ ಹೇಳಿದ್ದಾರೆ.
ಘಟನೆಯ ವಿವರ:
ಸೋಮವಾರ ಬೆಳಿಗ್ಗೆ ಕಲ್ಲಡ್ಕದ ದಾಸಕೋಡಿ ಎಂಬಲ್ಲಿ ಬೈಕ್ ಸ್ಕಿಡ್ ನಿಂದ ಅಪಘಾತಕ್ಕೊಳಗಾದ ಕಣ್ಣೂರಿನ ಇಬ್ಬರು ಉಸ್ತಾದರು ಮತ್ತು ಆರು ವರ್ಷದ ಮಗು ರಸ್ತೆಯ ಮೇಲೆ ಬಿದ್ದು ಹೊರಳಾಡುತ್ತಿದ್ದ ವೇಳೆ ಸಕಾಲದಲ್ಲಿ ಚಿಕಿತ್ಸೆ ಒದಗಿಸುವ ಮೂಲಕ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಸಂದೇಶ್ ಕಲ್ಲಡ್ಕ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಸಂದೇಶ್ ಅವರು ಕಟ್ಟಡ ನಿರ್ಮಾಣ ಗುತ್ತಿಗೆ ಕಾಮಗಾರಿಯನ್ನು ನಿರ್ವಹಿಸುತ್ತಿರುವರಾಗಿದ್ದಾರೆ. ಮಂಗಳವಾರ ಬೆಳಗ್ಗೆ ತನ್ನ ಕೆಲಸಗಾರರೊಂದಿಗೆ ಕಾರಿನಲ್ಲಿ ಕಟ್ಟಡ ಕಾಮಗಾರಿಯ ಹಿನ್ನಲೆಯಲ್ಲಿ ಪುತ್ತೂರಿಗೆ ತೆರಳುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಇಬ್ಬರು ಪುರುಷರು ಮತ್ತು ಮಗು ರಸ್ತೆಯಲ್ಲಿ ಬಿದ್ದು ಹೊರಲಾಡುತ್ತಿದ್ದರು. ಕೂಡಲೇ ಅಲ್ಲಿ ಯಾವ ಜಾತಿ ಮತ ಪಂಗಡ ಎಂಬುದನ್ನು ವಿಚಾರಿಸದೆ ತಮ್ಮ ಕಾರಿನಲ್ಲಿ ಮೂವರನ್ನು ಸೋಮಾಯಾಜಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲು ನೆರವಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅಪಘಾತಗಳು ಸಂಭವಿಸಿದ ಕೂಡಲೇ ಮೊಬೈಲ್ ನಲ್ಲಿ ಪೋಟೋ ತೆಗೆಯುವ ಹುಚ್ಚು ಹೆಚ್ಚಾಗುತ್ತಿದೆ ಹೊರತು ಪ್ರಾಣಾಪಾಯದಲ್ಲಿರುವ ವ್ಯಕ್ತಿಗಳನ್ನು ಸಕಾಲದಲ್ಲಿ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸಕ್ಕೆ ಯಾರು ಮುಂದಾಗುತ್ತಿಲ್ಲ. ಇಲ್ಲೂ ಅದೇ ನಡೆದಿದೆ. ಅಪಘಾತ ನಡೆದ ಸ್ಥಳದಲ್ಲಿ ಮೊಬೈಲ್ ನಲ್ಲಿ ಫೊಟೊ ಕ್ಲಿಕ್ ಮಾಡುವವರು ಇದ್ದರೇ ಹೊರತು, ಯಾರೂ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿರಲಿಲ್ಲ. ತಲೆಯಿಂದ ರಕ್ತ ಒಸರುತ್ತಿದ್ದ ಕಾರಣ ತುರ್ತು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾಗಿ ಸಂದೇಶ್ ಹೇಳಿದ್ದಾರೆ.