ಉಪ್ಪಿನಂಗಡಿ, ಜೂ 17 (DaijiworldNews/SM): ಉತ್ತರ ಪ್ರದೇಶದ ಮಥುರಾದಲ್ಲಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ವೀರ ಮರಣವನ್ನಪ್ಪಿದ ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಯೋಧ ಸಂದೇಶ್ ಶೆಟ್ಟಿ ಅವರ ಪಾರ್ಥೀವ ಶರೀರ ಬುಧವಾರದಂದು ಹುಟ್ಟೂರಿಗೆ ತರಲಾಯಿತು. ಬಳಿಕ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.
ಬೆಂಗಳೂರಿನಿಂದ ಉಪ್ಪಿನಂಗಡಿಯ ನೆಲ್ಯಾಡಿವರೆಗೆ ಮಿಲಿಟರಿ ವಾಹನದಲ್ಲಿ ಪಾರ್ಥೀವ ಶರೀರವನ್ನು ತರಲಾಯಿತು. ಬಳಿಕ, ನೆಲ್ಯಾಡಿಯಿಂದ ಯೋಧನ ಹುಟ್ಟೂರಾದ ಬಾರ್ಯಕ್ಕೆ ತೆರೆದ ವಾಹನದಲ್ಲಿ ಅಂತಿಮ ಯಾತ್ರೆ ನಡೆಯಿತು. ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಯೋಧ ಸಂದೇಶ್ ಪಾರ್ಥೀವ ಶರೀರಕ್ಕೆ ಗೌರವ ಸೂಚಿಸಿದರು.
ಯೋಧನ ಪಾರ್ಥೀವ ಶರೀರವನ್ನು ಹುಟ್ಟೂರಿನ ಸ.ಹಿ.ಪ್ರಾ.ಶಾಲೆ ಪೇರಿಯೊಟ್ಟುನಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಈ ವೇಳೆ, ಸೇನೆಯ ಅಧಿಕಾರಿಗಳಿಂದ ಸೇನಾ ಗೌರವ ಹಾಗೂ ಸಕಲ ಸರಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಯೋಧನ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸೈನಿಕನೊಬ್ಬನನ್ನು ಕಳೆದುಕೊಂಡರೆ ಮನೆಯ ಒಬ್ಬ ಮಗನನ್ನು ಕಳೆದುಕೊಂಡಂತೆ. ಯೋಧ ಸಂದೇಶ್ ಶೆಟ್ಟಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಪ್ರಾಣಾರ್ಪಣೆ ಮಾಡಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸಿದರು. ಯೋಧ ಸಂದೇಶ ಶೆಟ್ಟಿಯವರ ಅಂತಿಮ ವಿಧಿ ವಿಧಾನಗಳನ್ನು ಸ್ವಗೃಹದಲ್ಲೇ ನಿರ್ವಹಿಸಲಾಯಿತು.