ಉಡುಪಿ, ಏಪ್ರಿಲ್ 02: ಉಡುಪಿ ಜಿಲ್ಲೆಯ ಉಚ್ಚಿಲ ಸಮೀಪದ ಬಡಾ ಗ್ರಾಮದ ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ, ಗ್ರಾಮಸ್ಥರು ಕೂಡಾ ಜನಪ್ರತಿನಿಧಿಗಳಿಗೆ ಪಾಠ ಕಲಿಸುವ ಮಾರ್ಗೋಪಾಯವನ್ನು ಕಂಡುಕೊಂಡಿದ್ದಾರೆ. ಬಡಾ ಗ್ರಾಮದ ವಿವಿಧ ಬೇಡಿಕೆಗಳನ್ನು ಇದುವರೆಗೆ ಈಡೇರಿಸಿಲ್ಲ ಎಂದು ಆರೋಪಿಸಿ ಸ್ಥಳೀಯ ನಾಗರಿಕರು ಈ ಬಹಿಷ್ಕಾರದ ಬ್ಯಾನರ್ ಹಾಕಿದ್ದಾರೆ. ಕಡಲ ಕಿನಾರೆಯ ಬಳಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ.
ಕಾಪು ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಉಚ್ಚಿಲದ ಬಡಾ ಗ್ರಾಮ ಸೇರಿದ್ದು ಗ್ರಾಮದ ಒಳಗೆ ಸಮುದ್ರದ ನೀರು ಹರಿದು ಬಂದು ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳ ಸಂಕಷ್ಟ ತೋಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮೀನುಗಾರರಿಗೆ ಮನೆ ನಿರ್ಮಾಣ ಯೋಜನೆ ಮತ್ಸ್ಯಾಶ್ರಯ ಸಹಾಯ ಧನ ಪಡೆಯಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾನ ವನ್ನು ಬಹಿಷ್ಕರಿಸಲು ಇಲ್ಲಿಯ ಜನರು ತೀರ್ಮಾನಿಸಿದ್ದಾರೆ.