ಉಳ್ಳಾಲ, ಜೂ 18 (DaijiworldNews/PY) : ಪದವಿಪೂರ್ವ ಪರೀಕ್ಷೆ ಬರೆಯಲು ಕೇರಳ ಭಾಗದಿಂದ ಬಂದ ಸುಮಾರು 760 ರಷ್ಟು ವಿದ್ಯಾರ್ಥಿಗಳನ್ನು 12 ಖಾಸಗಿ ಕಾಲೇಜು ಮತ್ತು 22 ಕೆಎಸ್ಆರ್ಟಿಸಿ ಬಸ್ಸುಗಳ ಮೂಲಕ ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಸಹಯೋಗದಿಂದ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಯಿತು.
ತಲಪಾಡಿ ಗಡಿಭಾಗದವರೆಗೆ ಹೆತ್ತವರು ಮಕ್ಕಳನ್ನು ಬೆಳಿಗ್ಗೆ 7 ಗಂಟೆಗೆ ತಂದು ಬಿಟ್ಟರು. ಆ ಬಳಿಕ ಪದವಿಪೂರ್ವ ಶಿಕ್ಷಣ ಇಲಾಖೆ ನಿಯೋಜಿಸಿದ ನೋಡೆಲ್ ಅಧಿಕಾರಿ ವಿಠಲ್ ಅಬೂರ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು ಕುಂಜತ್ತೂರು ಮರಿಯಾಶ್ರಮ ಚರ್ಚ್ ಆವರಣದಲ್ಲಿ ಸೆಂಟರ್ಗಳ ಆಧಾರದಲ್ಲಿ ಪ್ರತ್ಯೇಕ ವಿಭಜಿಸಲಾಯಿತು. ಅಲ್ಲಿಂದ ಬಸ್ಸುಗಳ ಮೂಲಕ ಕಳುಹಿಸಲಾಯಿತು. ಬಸ್ಸುಗಳಲ್ಲಿ ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಯಿತು. ಹೆತ್ತವರು ಯಾರು ಒಳಪ್ರವೇಶಿಸದಂತೆ ಕರ್ನಾಟಕ ಪೊಲೀಸರು ತಡೆಹಿಡಿದರು.
ವ್ಹೀಲ್ ಚೇರ್ ನಲ್ಲಿ ಬಂದ ವಿದ್ಯಾರ್ಥಿನಿ
ವರ್ಕಾಡಿ ಸುಂಕದಕಟ್ಟೆ ಗಾಂಧಿನಗರ ನಿವಾಸಿ ಆಯೇಷಾ ಅನ್ನುವ ವಿದ್ಯಾರ್ಥಿನಿಗೆ ಕತ್ತಿ ತಾಗಿ ಕಾಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವ್ಹೀಲ್ ಚೇರ್ ಮೂಲಕ ತಲಪಾಡಿ ತಲುಪಿದ ವಿದ್ಯಾರ್ಥಿನಿಯನ್ನು ಹಝ್ರತ್ ಸೈಯ್ಯದ್ ಮದಿನ ಕಾಲೇಜು ಪ್ರಾಂಶುಪಾಲೆ ಸಂಗೀತಾ ತಮ್ಮ ಕಾರಿನಲ್ಲೇ ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದು, ವಾಪಸ್ಸು ಕರೆತರುವ ಭರವಸೆಯನ್ನು ಹೆತ್ತವರಿಗೆ ನೀಡಿದರು. ಇವರೊಂದಿಗೆ ಹರ್ಷಾದ್ ವರ್ಕಾಡಿ ಉಪಸ್ಥಿತರಿದ್ದರು.