ಮಂಗಳೂರು, ಏ. 2: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾಪುರ 4ನೆ ಬ್ಲಾಕ್ನ ಮನೆಯೊಂದರಲ್ಲಿ ದುಷ್ಕೃತ್ಯ ಎಸಗಲು ತಲವಾರನ್ನು ಬಚ್ಚಿಡಲಾಗಿದೆ ಎಂಬ ಖಚಿತ ಮಾಹಿತಿ ಪಡೆದ ಪಣಂಬೂರು ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದ ರೌಡಿ ನಿಗ್ರಹ ದಳದ ಪೊಲೀಸರು ಏ 1 ರ ಭಾನುವಾರ ದಾಳಿ ನಡೆಸಿ ಆರೋಪಿ ಸಂದೀಪ್ ಸಹಿತ ನಾಲ್ಕು ಮಂದಿಯನ್ನು ಬಂಧಿಸಿ 3 ತಲವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ತಲವಾರುಗಳನ್ನು ಮುಂದಿನ ತನಿಖೆಗಾಗಿ ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಪ್ರಮುಖ ಆರೋಪಿ ಸಂದೀಪ್ ನೀಡಿದ ಮಾಹಿತಿಯಂತೆ ಪೊಲೀಸರು ಆತನ ಸಹಚರರಾದ ಉಡುಪಿ ಹಾರಾಡಿ ನಿವಾಸಿ ಆಕಾಶ್, ಅಡ್ಯಾರ್ ಸಮೀಪದ ಫರಂಗಿಪೇಟೆ ನಿವಾಸಿ ಚರಣ್ರಾಜ್ ಯಾನೆ ಚನ್ನು, ಧರ್ಮಸ್ಥಳ ಕೊಲ್ಪೆನಿವಾಸಿ ರಕ್ಷಿತ್ ಎಂಬವರನ್ನು ಕುತ್ತೆತ್ತೂರಿನಲ್ಲಿ ಬಂಧಿಸಿ ಅವರಿಂದ ಎರಡು ನಾಡ ಪಿಸ್ತೂಲ್, 10 ಗುಂಡು ಹಾಗೂ 3 ತಲವಾರಗಳನ್ನು ವಶಪಡಿಸಿಕೊಂಡಿದ್ದಾರೆ.