ಮಂಗಳೂರು, ಏ 02 : ಮಂಗಳೂರು ಪೊಲೀಸ್ ಕಮೀಷನರೇಟ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಕೆ.ಎಸ್.ಆರ್.ಪಿ 7ನೇ ಪಡೆ ಮಂಗಳೂರು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ದ್ವಜ ಹಾಗೂ ಕಲ್ಯಾಣ ದಿನಾಚರಣೆಯನ್ನು ಇಂದು ಬೆಳಿಗ್ಗೆ ಮಂಗಳೂರು ಡಿ.ಎ.ಆರ್ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಜೆ.ಅರುಣ್ ಚಕ್ರವರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಉಪ ನಿರೀಕ್ಷಕರಾದ ಪ್ರಕಾಶ್ ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ.ಟಿ.ಆರ್ ಸುರೇಶ್ , ದ,ಕ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಡಾ.ಬಿ.ಆರ್ ರವಿಕಾಂತೇಗೌಡ, ಕೆ.ಎಸ್.ಆರ್.ಪಿ ಕಮಾಂಡೆಂಟ್ ಶ್ರೀ ಜನಾರ್ಧನ ಆರ್ ಉಪಸ್ಥಿತರಿದ್ದರು.
ನಿವೃತ್ತ ಉಪನಿರೀಕ್ಷಕ ಪ್ರಕಾಶ್ ಕುಮಾರ್ ಅವರು , 41 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ತಮ್ಮ ವೃತ್ತಿ ಜೀವನದಲ್ಲಿ ಎದುರಾದ ಹಲವಾರು ಸವಾಲುಗಳನ್ನು ಹಂಚಿಕೊಂಡರು. ಪೊಲೀಸರು ಕರ್ತವ್ಯಕ್ಕಾಗಿ ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗವನ್ನು ನೆನಪಿಸುವ ಅಗತ್ಯವಿದೆ ಎಂದರು. ಕಾನೂನಿನ ಸುವ್ಯವಸ್ಥೆಯನ್ನು ಕಾಪಾಡುವ ಸಂದರ್ಭದಲ್ಲಿ ಬರುವ ಸವಾಲುಗಳನ್ನು ಧನತ್ಮಾಕವಾಗಿ ನಿಭಾಯಿಸಬೇಕು ಎಂದರು. ಇದೇ ವೇಳೆ ಮಾತನಾಡಿದ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಜೆ.ಅರುಣ್ ಚಕ್ರವರ್ತಿ, ಪೊಲೀಸ್ ಇಲಾಖೆ ಬೀಟ್ ಸಿಸ್ಟಂ ಮೂಲಕ ಸದೃಢಗೊಂಡಿದ್ದು, ಜನಸ್ನೇಹಿಯಾಗಿ ಬೆಳೆದಿದೆ. ಹಾಗಾಗಿ ಇಲಾಖೆಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವುದು ಹೆಮ್ಮೆಯ ಸಂಗತಿ ಎಂದರು.