ಮಂಗಳೂರು, ಜೂ 18 (DaijiworldNews/SM): ದ.ಕ. ಜಿಲ್ಲೆಯಲ್ಲಿ ಗುರುವಾರದಂದು ಮತ್ತೆ 23 ಮಂದಿ ಕೊರೊನಾ ಸೋಂಕು ಪತ್ತೆಯಾಗಿದೆ. ಅಲ್ಲದೆ, ಅದೇ ದಿನ 236 ಮಂದಿಯ ವರದಿ ನೆಗೆಟಿವ್ ಆಗಿದೆ.
ಗುರುವಾರದಂದು 259 ಮಂದಿಯ ವರದಿ ಲಭ್ಯವಾಗಿದೆ. ಈ ಪೈಕಿ 236 ಮಂದಿಯಲ್ಲಿ ಸೋಂಕು ಇಲ್ಲ ಎಂಬುವುದು ಸ್ಪಷ್ಟಗೊಂಡಿದೆ. ಈ ನಡುವೆ ಜಿಲ್ಲೆಯಲ್ಲಿ ಇಂದು ಆರು ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಗುಣಮುಖರಾದವರ ಪೈಕಿ 12 ವರ್ಷದ ಮಗು ಸೇರಿಕೊಂಡಿದೆ. ಉಳಿದಂತೆ 24, 28,29 ವರ್ಷದ ಯುವಕರು, 46 ಹಾಗೂ 52 ವರ್ಷದ ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಗುಣಮುಖರಾದವರೆಲ್ಲರೂ ಪುರುಷರಾಗಿದ್ದಾರೆ.
ಇನ್ನು ಪಾಸಿಟಿವ್ ಪತ್ತೆಯಾದವರ ಪೈಕಿ 21 ಮಂದಿ ಸೌದಿ ಅರೇಬಿಯಾದಿಂದ ಮರಳಿದವರಾಗಿದ್ದಾರೆ. ಇವರೆಲ್ಲರೂ ಕ್ವಾರಂಟೈನ್ ನಲ್ಲಿದ್ದರು ಎಂಬ ಬಗ್ಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಉಳಿದ ಇಬ್ಬರಿಗೆ ಸೋಂಕಿತರ ಪ್ರಥಮ ಸಂಪರ್ಕದಿಂದಾಗಿ ಕೊರೊನಾ ತಗುಲಿದೆ ಎಂದು ತಿಳಿದು ಬಂದಿದೆ. ಇನ್ನು ಗುರುವಾರ ಪಾಸಿಟಿವ್ ಪತ್ತೆಯಾದವರ ಪೈಕಿ ಬಹುತೇಕ ಸೋಂಕಿತರು ಯುವಕರಾಗಿದ್ದಾರೆ.