ಪುತ್ತೂರು, ಜೂ 19 (Daijiworld News/MSP): ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ಸ್ ಸ್ಟೇಬಲ್ ವಿರುದ್ದ ಪತ್ನಿ ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.
ಐದು ತಿಂಗಳ ಹಿಂದೆಯಷ್ಟೇ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರ ವಿವಾಹ ನೋಂದಣಿ ಆಗಿತ್ತು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ಸ್ ಸ್ಟೇಬಲ್ ಶಾಂತಕುಮಾರ್ ಅವರ ಪತ್ನಿ ಅಶ್ವಿನಿ ಶಾರದಾ(27), ದೈಹಿಕ ಮತ್ತು ಮಾನಸಿಕ ಹಿಂಸೆಗೊಳಗಾಗಿರುವುದಾಗಿ ದೂರು ನೀಡಿದ್ದಾರೆ. ಜೂ.16ರಂದು ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಪ್ರೀತಿಸಿ ನಾವಿಬ್ಬರು ೫ ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದೆವು. ಆದರೆ ಮದುವೆಯಾದ ಬಳಿಕ ಶಾಂತಕುಮಾರ್ ನನ್ನ ಜೊತೆ ಅನ್ಯೋನ್ಯತೆಯಿಂದ ಇರದೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು. ಹಾಗಾಗಿ ನಾನು ಪಡ್ನೂರಿನಲ್ಲಿ ನನ್ನ ತಾಯಿ ಮನೆಯಲ್ಲೇ ಇದ್ದು, ಆಗಾಗ್ಗೆ ಸಂಪ್ಯದಲ್ಲಿರುವ ಗಂಡನ ವಸತಿ ಗೃಹಕ್ಕೆ ಬಂದು ಹೋಗುತ್ತಿದ್ದು ಇತ್ತೀಚೆಗೆ ಪತಿ ನನ್ನೊಂದಿಗೆ ಮಾತು ನಿಲ್ಲಿಸಿದ್ದರು. ನಾನು. ಜೂ.16ರಂದು ವಸತಿ ಗೃಹಕ್ಕೆ ಹೋಗಿದ್ದ ಸಂದರ್ಭ ಜೀವ ಬೆದರಿಕೆ ಹಾಕಿ ಹೆಲ್ಮೆಟ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಅಶ್ವಿನಿ ದೂರಿನಲ್ಲಿ ತಿಳಿಸಿದ್ದಾರೆ.