ಮಂಗಳೂರು,ಜೂ 19 (Daijiworld News/MSP): ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ತಲಪಾಡಿ ಗಡಿ ಬಂದ್ ಮಾಡಲಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ಚಿಕಿತ್ಸೆಗಾಗಿ ದಕ್ಷಿಣ ಕನ್ನಡ ಜಿಲ್ಲೆಆಗಮಿಸುವ ಸಾವಿರಾರು ಜನರಿಗೆ ತೊಂದರೆ ಆಗುತ್ತಿರುವುದರಿಂದ ಅವರ ಅನುಕೂಲಕ್ಕಾಗಿ ಕೆಲವೇ ದಿನಗಳಲ್ಲಿ ಹೊಸ ನಿಯಮಾವಳಿ ರೂಪಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧರಿಸಿದೆ.

ಕಾಸರಗೋಡಿನ ರೋಗಿಗಳು ಚಿಕಿತ್ಸೆ ಸಿಗದೆ ಅಳಲು ತೋಡಿಕೊಳ್ಳುತ್ತಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಪ್ರಮುಖರು ಎರಡು ದಿನದ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನಲೆಯಲ್ಲಿ ರೋಗಿ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸಿದ್ದಾರೋ ಅದೇ ಆಸ್ಪತ್ರೆಯವರು ರೋಗಿ ಇರುವ ಸ್ಥಳದಿಂದ ಕರೆತರುವ ಜವಾಬ್ದಾರಿ ವಹಿಸಿ ಕೊಳ್ಳುವುದಾದರೆ ಅವಕಾಶ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೆಲವೇ ದಿನಗಳಲ್ಲಿ ಮಾಡಲು ಸಿದ್ಧತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಜಿಲ್ಲಾಡಳಿತವೂ ಗಡಿ ಜಿಲ್ಲೆ ಕಾಸರಗೋಡಿನಿಂದ ಮಂಗಳೂರಿಗೆ ಬರುವ ಉದ್ಯೋಗಿಗಳಿಗೆ ನಿತ್ಯ ಓಡಾಟದ ಪಾಸ್ ವ್ಯವಸ್ಥೆ ಮಾಡಿದೆ. ಇದಲ್ಲದೆ ಕೊರೊನಾ ನೆಗೆಟಿವ್ ವರದಿಯಿದ್ದ ರೋಗಿಯೂ ಆಂಬುಲೆನ್ಸ್ ಮೂಲಕ ಜಿಲ್ಲೆಗೆ ಬಂದು ತುರ್ತು ಚಿಕಿತ್ಸೆಯನ್ನು ಪಡೆಯಲು ಅವಕಾಶ ನೀಡಲಾಗಿದೆ.