ಮಂಗಳೂರು, ಜೂ 19 (DaijiworldNews/PY) : ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದು ರೋಗಿಗಳಿಗೆ ಚಿಕಿತ್ಸೆ ನೀಡದೇ ಆಸ್ಪತ್ರೆಯ ಸಿಬ್ಬಂದಿ ಕಂಕನಾಡಿ ಮಾರ್ಕೆಟ್ ಬಳಿ ಬಿಟ್ಟ ಅಮಾನವೀಯ ಘಟನೆ ನಡೆದಿದೆ.

ಉಪ್ಪಿನಂಗಡಿಯ ರಘುರಾಮ, ಬೆಂಜನಪದವಿನ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ ಬೀದಿ ಪಾಲಾದ ರೋಗಿಗಳು.
ಈ ನಾಲ್ವರು ರೋಗಿಗಳು ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಹಿಂದೆ ಚಿಕಿತ್ಸೆ ಪಡೆಯುತ್ತಿದ್ದರು. ವೆನ್ ಲಾಕ್ ಆಸ್ಪತ್ರೆ ಕೊರೊನಾ ಆಸ್ಪತ್ರೆಯಾದ ಹಿನ್ನೆಲೆ ಅಲ್ಲಿನ ರೋಗಿಗಳನ್ನು ಬೇರೆ ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದ್ದು, ಹಾಗಾಗಿ ಈ ನಾಲ್ವರನ್ನು ಮೂರು ತಿಂಗಳ ಹಿಂದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಜಿಲ್ಲಾಡಳಿತ ಶಿಫ್ಟ್ ಮಾಡಿತ್ತು.
ಇವರು ಹೃದಯ ಖಾಯಿಲೆ, ಕಾಲು ನೋವು ಮತ್ತು ಇತರೆ ಖಾಯಿಲೆ ಇರುವ ರೋಗಿಗಳಾಗಿದ್ದು, ಮೂರು ತಿಂಗಳಿಗೂ ಅಧಿಕ ಸಮಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಉಚಿತ ಚಿಕಿತ್ಸೆ ನೀಡಲಾಗದೇ ವೃದ್ದ ರೋಗಿಗಳನ್ನು ಆಸ್ಪತ್ರೆಯ ಸಿಬ್ಬಂದಿ ನಿನ್ನೆ ಸಂಜೆ ಅಂಬ್ಯುಲೆನ್ಸ್ ನಲ್ಲಿ ತಂದು ಬಿಟ್ಟು ಹೋಗಿದ್ದಾರೆ.
ದ.ಕ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಬೀದಿಪಾಲಾದ ಹಿರಿಯ ಜೀವಗಳು ಮಳೆ, ಚಳಿಯಲ್ಲಿ ಮಾರುಕಟ್ಟೆ ಜಗಲಿಯಲ್ಲಿ ವಾಸ ಮಾಡುತ್ತಿದ್ದು, ಇವರಿಗೆ ಸ್ಥಳೀಯ ರಿಕ್ಷಾ ಚಾಲಕರು, ಮಾರುಕಟ್ಟೆ ವ್ಯಾಪಾರಿಗಳು ನೀರು ಹಾಗೂ ಊಟದ ವ್ಯವಸ್ಥೆ ಮಾಡಿದ್ದಾರೆ.