ಉಳ್ಳಾಲ, ಜೂ 19 (Daijiworld News/MSP): ಇಲ್ಲಿನ ತೊಕ್ಕೊಟ್ಟು ಒಳಪೇಟೆಯಲ್ಲಿ ಗುರುವಾರ ತಡರಾತ್ರಿ ಮಾಂಸದಂಗಡಿ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಶಂಕಿತ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಳ್ಳಾಲ ಭಾಗದಲ್ಲಿ ಹಲವು ಕಡೆ ಮಾಂಸದಂಗಡಿ ಹೊಂದಿದ್ದ ಹಳೆಕೋಟೆ ನಿವಾಸಿ ನಝೀರ್(47) ತೊಕ್ಕೊಟ್ಟು ಒಳಪೇಟೆಯತ್ತ ಬೀಡಾ ತಿನ್ನಲು ಬಂದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಇವರ ಮೇಲೆ ತಲವಾರು ದಾಳಿ ನಡೆಸಿದ್ದರು.
ಇದೀಗ ತಲವಾರು ದಾಳಿ ನಡೆಸಿದ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ.
ನಝೀರ್ ಅವರಿಗೆ ಉಳ್ಳಾಲ, ಮುಕ್ಕಚ್ಚೇರಿ ಸೇರಿದಂತೆ ಹಲವೆಡೆ ಬೀಫ್ ಅಂಗಡಿಯನ್ನು ಹೊಂದಿದ್ದು, ಟಿ.ಸಿ ರೋಡ್ ನಲ್ಲಿರುವ ಮರದ ಮಿಲ್ ಗೆ ಸಂಬಂಧಿಸಿ ಕುಟುಂಬದ ಒಳಗೇ ಮನಸ್ತಾಪವಿತ್ತು. ಇದೇ ವಿಚಾರವಾಗಿ ನಾಲ್ಕು ದಿನಗಳ ಹಿಂದಷ್ಟೇ ಗಲಾಟೆ ನಡೆದು ಪ್ರಕರಣ ಠಾಣೆ ಮೆಟ್ಟಿಲೇರಿ, ಬಳಿಕ ರಾಜಿ ಪಂಚಾಯಿತಿ ನಡೆಸಲಾಗಿತ್ತು . ಇದೇ ಪ್ರಕರಣ ಸಂಬಂಧ ಕುಟುಂಬಕ್ಕೆ ಸಂಬಂಧಿಸಿದ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.