ಮಂಗಳೂರು, ಏ 3 : ತಾಯಿಯ ಶತಮಾನೋತ್ಸವದ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲೆಂದು ಬಂದಿದ್ದ 75 ವರ್ಷದ ಮಗಳು ಹುಟ್ಟುಹಬ್ಬ ಆಚರಣೆಯ ಸಂದರ್ಭವೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
75 ವರ್ಷದ ವಯೋವೃದ್ಧೆ ಗ್ಲೊರಿಯಾ ಲೊಬೊ ವಿಧವೆಯಾಗಿದ್ದು, ಕೆನಡಾದಲ್ಲಿ ವಾಸಿಸುತ್ತಿದ್ದರು. ತನ್ನ ತಾಯಿಯ 100ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲೆಂದೇ ಮಂಗಳೂರಿಗೆ ನಾಲ್ಕು ದಿನಗಳ ಹಿಂದೆ ಆಗಮಿಸಿದ್ದರು. ನಗರದ ಪಾಂಡೇಶ್ವರದ ವೃದ್ಧಾಶ್ರಮ ನಿಂಪ ಸದನ್ ನಲ್ಲಿ ತಾಯಿ ಗ್ಲಾಡಿಸ್ ಡಿಸೋಜ ಅವರ ಅದ್ದೂರಿ ಹುಟ್ಟುಹಬ್ಬ ಆಚರಣೆಯನ್ನಿಟ್ಟುಕೊಂಡಿದ್ದರು. ತಮ್ಮ ಪುತ್ರಿ ಲಿಝಾ ಮತ್ತು ಸೋದರರಾದ ಟ್ರೆವರ್ ಡಿಸೋಜ ಮತ್ತು ಕ್ರಿಸ್ಟೋಫರ್ ಡಿಸೋಜ ಜತೆಯಾಗಿ ತಮ್ಮ ತಾಯಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಖುಷಿ ಖುಷಿಯಾಗಿ ಇದ್ದ ಅವರು ತಾಯಿಯ ಹುಟ್ಟುಹಬ್ಬದ ಸವಿನೆನಪಿಗಾಗಿ ಹಾಡೊಂದು ರಚಿಸಿ ಹಾಡಿದ್ದರು. ತಾಯಿ ಗ್ಲಾಡಿ ಡಿಸೋಜ ಅವರ ಶತಮಾನೋತ್ಸವದ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇಕ್ ಕತ್ತರಿಸಿದ ಬಳಿಕ ಅಲ್ಲೆ ಇದ್ದ ಮಗಳು ಗ್ಲೊರಿಯಾ ಲೊಬೊ ಹಠಾತ್ತನೆ ಕುಸಿದು ಬಿದ್ದರು. ತಕ್ಷಣವೇ ಅವರ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋದರು ಕೂಡಾ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.ಶತಮಾನ ಪೂರೈಸಿರುವ ಗ್ಲಾಡಿ ಡಿಸೋಜ ಅವರಿಗೆ ಶ್ರವಣ ಸಮಸ್ಯೆ ಮತ್ತು ನೆನಪುಶಕ್ತಿಯ ಕೊರತೆ ಇರೋದ್ರಿಂದ ಮಗಳ ಸಾವಿನ ಸಂದರ್ಭವನ್ನು ಅವರಿಗೆ ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ ಎನ್ನುತ್ತಾರೆ ಅವರ ಕುಟುಂಬಸ್ಥರು.
ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಗ್ಲೋರಿಯಾ ಲೊಬೊ ಅವರಿಗೆ ಬೈಪಾಸ್ ಸರ್ಜರಿಯಾಗಿತ್ತು. ತುಂಬಾ ಖುಷಿಯಿಂದ ತಾಯಿಯ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದ ಗ್ಲೊರಿಯಾಗೆ ಹವಾಮಾನ ವ್ಯತ್ಯಾಸದಿಂದ ತೊಂದರೆಯಾಗಿರಬಹುದು ಎಂದು ಕುಟುಂಬಿಕರು ಹೇಳುತ್ತಾರೆ. ಗ್ಲೊರಿಯಾ ಅಂತ್ಯಸಂಸ್ಕಾರ ಕೆನಡಾದಲ್ಲಿ ನಡೆಯಲಿದೆ ಎಂದು ಅವರ ಕುಟುಂಬಿಕರು ತಿಳಿಸಿದ್ದಾರೆ.