ಮಂಗಳೂರು, ಜೂ 19 (DaijiworldNews/PY): ನಾಲ್ವರು ವೃದ್ದ ರೋಗಿಗಳನ್ನು ಚಿಕಿತ್ಸೆ ಕೊಡದೇ ಬೀದಿಯಲ್ಲಿ ಬಿಟ್ಟ ಪ್ರಕರಣದ ಹಿನ್ನೆಲೆ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಸೂಚನೆ ಮೇರೆಗೆ ನಾಲ್ವರು ವೃದ್ದರನ್ನು ಇಎಸ್ಐ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.




ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಪಾಲಿಕೆ ಅಧಿಕಾರಿಗಳು, ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಾಲ್ವರು ವೃದ್ದ ರೋಗಿಗಳನ್ನು ಕದ್ರಿಯ ಇಎಸ್ಐ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಬೇರೆ ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಈ ನಾಲ್ವರು ರೋಗಿಗಳು ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಹಿಂದೆ ಚಿಕಿತ್ಸೆ ಪಡೆಯುತ್ತಿದ್ದರು. ವೆನ್ ಲಾಕ್ ಆಸ್ಪತ್ರೆ ಕೊರೊನಾ ಆಸ್ಪತ್ರೆಯಾದ ಹಿನ್ನೆಲೆ ಅಲ್ಲಿನ ರೋಗಿಗಳನ್ನು ಬೇರೆ ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದ್ದು, ಹಾಗಾಗಿ ಈ ನಾಲ್ವರನ್ನು ಮೂರು ತಿಂಗಳ ಹಿಂದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಜಿಲ್ಲಾಡಳಿತ ಶಿಫ್ಟ್ ಮಾಡಲಾಗಿತ್ತು.
ಇವರು ಹೃದಯ ಖಾಯಿಲೆ, ಕಾಲು ನೋವು ಮತ್ತು ಇತರೆ ಖಾಯಿಲೆ ಇರುವ ರೋಗಿಗಳಾಗಿದ್ದು, ಮೂರು ತಿಂಗಳಿಗೂ ಅಧಿಕ ಸಮಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಉಚಿತ ಚಿಕಿತ್ಸೆ ನೀಡಲಾಗದೇ ವೃದ್ದ ರೋಗಿಗಳನ್ನು ಆಸ್ಪತ್ರೆಯ ಸಿಬ್ಬಂದಿ ನಿನ್ನೆ ಸಂಜೆ ಅಂಬ್ಯುಲೆನ್ಸ್ನಲ್ಲಿ ತಂದು ಬಿಟ್ಟು ಹೋಗಿದ್ದರು.