ಉಳ್ಳಾಲ, ಜೂ 19 (DaijiworldNews/SM): ನೇತ್ರಾವತಿ ಸೇತುವೆ ಬಳಿಯಿಂದ ಕಂಕನಾಡಿಯಲ್ಲಿ ಸೆಕ್ಯುರಿಟಿ ಗಾಡ್೯ ಆಗಿರುವ ಉಳ್ಳಾಲ ನಿವಾಸಿ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಶುಕ್ರವಾರ ಸಂಜೆ ವೇಳೆ ನಡೆದಿದೆ. ಕೇರಳದಲ್ಲಿರುವ ಪತ್ನಿಯನ್ನು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ನೊಂದು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಉಳ್ಳಾಲ ನಿವಾಸಿ 40 ರ ಹರೆಯದ ವ್ಯಕ್ತಿ ನಾಪತ್ತೆಯಾದವರು. ಕಂಕನಾಡಿಯಲ್ಲಿ ಕೆಲಸ ಮುಗಿಸಿ ಉಳ್ಳಾಲ ಕಡೆಗೆ ತೆರಳುತ್ತಿದ್ದ ಸಂದರ್ಭ ನೇತ್ರಾವತಿ ಸೇತುವೆಯಲ್ಲಿ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದಾರೆ. ವ್ಯಕ್ತಿ ನದಿಗೆ ಹಾರಿರುವುದನ್ನು ವಾಹನ ಸವಾರರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊಬೈಲ್ ಮೂಲಕ ಕೇರಳದಲ್ಲಿರುವ ವ್ಯಕ್ತಿಯ ಪತ್ನಿಯನ್ನು ಸಂಪರ್ಕಿಸಿರುವ ಕಂಕನಾಡಿ ಪೊಲೀಸರು, ಮಾಹಿತಿ ತಿಳಿಸಿದ್ದಾರೆ.
ಪತ್ನಿ ಇದೀಗ ಕೇರಳದಿಂದ ಮಂಗಳೂರಿಗೆ ಬಂದ ಬಳಿಕವಷ್ಟೇ ನಾಪತ್ತೆಗೆ ನಿಖರ ಕಾರಣ ತಿಳಿದುಬರಬೇಕಿದೆ. ಲಾಕ್ ಡೌನ್ ಆದ ಬಳಿಕ ಕೇರಳಕ್ಕೆ ತೆರಳಲು ಅಸಾಧ್ಯವಾಗಿದ್ದು, ಇದರಿಂದ ಪತ್ನಿಯನ್ನು ಕಾಣದೇ ಮಾನಸಿಕವಾಗಿ ನೊಂದು ವ್ಯಕ್ತಿ ಆತ್ಮಹತ್ಯೆ ಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.