ಮಂಗಳೂರು, ಜೂ 20 (Daijiworld News/MSP): ಕೈಕಾಲು ತೊಳೆಯಲು ನದಿಗಿಳಿದ ಬಾಲಕ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ದುರ್ಮರಣಕ್ಕೀಡಾದ ಘಟನೆ ಶನಿವಾರ ಸಂಜೆ ಬೋಳಿಯಾರಿನಲ್ಲಿ ನಡೆದಿದೆ.

ಮೃತ ಬಾಲಕನನ್ನು ಕೊಣಾಜೆ ಸಮೀಪದ ನಡುಪದವು ನಿವಾಸಿ ಫಾಝಿಲ್(15) ಎಂದು ಗುರುತಿಸಲಾಗಿದೆ.
ಫಾಝಿಲ್ ಬೋಳಿಯಾರುವಿನ ಧರ್ಮನಗರ ಸಮೀಪದ ಜಲಕದಕಟ್ಟೆ ಎಂಬಲ್ಲಿ ತೋಟವೊಂದರ ಕೆಲಸಕ್ಕೆ ಸ್ನೇಹಿತರೊಂದಿಗೆ ತೆರಳಿದ್ದು, ಅಲ್ಲಿ ತೆಂಗಿನಕಾಯಿ ಹೆಕ್ಕಿದ ಬಳಿಕ ತೋಟದ ಪಕ್ಕವೇ ಹರಿಯುವ ನದಿ ಕಿನಾರೆಯ ಬಳಿ ತೆರಳಿ ಕೈಕಾಲು ತೊಳೆಯಲು ಇಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದು ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಣಾಜೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.