ಮಂಗಳೂರು, ಏ 03: ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಆವರಿಸಿರುವ ಕಾರ್ಮೋಡವನ್ನು ಸರಿಸಲು ಮನೆ ಮನ ಕಮಲ ಅಭಿಯಾನ ನಡೆಯಲಿದೆ ಎಂದು ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ಹೇಳಿದರು. ನಗರದ ಪತ್ರಿಕಾಗೋಷ್ಟಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಏ 6 ರಂದು ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಮನೆ ಮನ ಕಮಲ ಅಭಿಯಾನ ಆರಂಭಗೊಳ್ಳಲಿದೆ. ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ಆವರಿಸಿರುವ ಕಾರ್ಮೋಡವನ್ನು ಸರಿಸಿ ಬಿಜೆಪಿಯ ಬೆಳ್ಳಿ ಮೋಡವು ಆವರಿಸುವಂತೆ ಮಾಡಿ ಕನ್ನಡ ನಾಡನ್ನು ಸರ್ವ ಶಾಂತಿಯ ತೋಟವನ್ನಾಗಿ ಮಾಡಲು ಮಹಿಳಾ ಕಾರ್ಯಕರ್ತರು ಸಜ್ಜಾಗಿದ್ದಾರೆ. ಪ್ರತಿ ಬೂತ್ ಗಳಲ್ಲಿನ ಮನೆ ಮನೆಗೆ ತೆರಳಿ ನಮ್ಮ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಾರೆ ಎಂದರು. ಮಹಿಳಾ ದೌಜನ್ಯ ಮಹಿಳಾ ಶೋಷಣೆಯ ವಿರುದ್ದ ಧ್ವನಿ ಎತ್ತಿ ಮಹಿಳೆಯ ಸ್ವಾವಲಂಬಿ ಬದುಕಿಗೆ ಬಿಜೆಪಿಯ ಕೊಡುಗೆಯನ್ನು ಮನದಟ್ಟು ಮಾಡಲಿದ್ದಾರೆ. ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ವಿರೋಧಿ ಕೃತ್ಯಗಳು, ಧರ್ಮ ಧರ್ಮಗಳನ್ನು ಒಡೆಯುವಂತ ಹುನ್ನಾರ, ಓಟ್ ಬ್ಯಾಂಕಿನ ರಾಜಕಾರಣ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿರುವ ಎಲ್ಲಾ ಪ್ರಸಂಗವನ್ನು ಮುಂದಿಟ್ಟು ಜನರ ಮನವನ್ನು ಮುಟುವ ಕೆಲಸ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರಿಂದ ಮನೆಮನೆ ಗೆ ತೆರಳಿ ನಡೆಯುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರಭಾಮಾಲಿನಿ ಮತ್ತಿತರರು ಉಪಸ್ಥಿತರಿದ್ದರು.