ಮಂಗಳೂರು, ಏ 03 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಕಳೆದ ಎರಡು ತಿಂಗಳ ಹಿಂದೆ ನಡೆದ ದುಬಾರಿ ಪಾರ್ಕಿಂಗ್ ಶುಲ್ಕ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಂಡರ್ ವಹಿಸಿಕೊಂಡಿದ್ದ ಎಸ್.ಎಸ್. ಎಂಟರ್ಪ್ರೈಸಸ್ ವಿರುದ್ಧ ನಿಮಾನ ನಿಲ್ದಾಣ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಈ ಹಿಂದೆ ನಡೆದ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿ ಪ್ರಾಧಿಕಾರ ಕಂಪೆನಿಗೆ 2.58 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೆ ಇಂದು ಮಂಜಾನೆಯಿಂದಲೇ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಾಹನಗಳಿಂದ ಸಂಗ್ರಹಿಸಲಾಗುತ್ತಿದ್ದಂತಹ ಸುಂಕವನ್ನು ತಡೆಹಿಡಿಯಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಆಡಳಿತ ನಿರ್ದೇಶಕ ವಿ.ವಿ ರಾವ್ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಬಗ್ಗೆ ಸ್ಪಷ್ಟನೆ ನೀಡಿ ಮಾತನಾಡಿದ ಅವರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ.ರಾವ್, ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮುಂಬೈನ ಎಸ್.ಎಸ್. ಎಂಟರ್ಪ್ರೈಸಸ್ ಸಂಸ್ಥೆ ಪಾರ್ಕಿಂಗ್ ಶುಲ್ಕ ಸಂಗ್ರಹದ ಗುತ್ತಿಗೆಯನ್ನು ವಹಿಸಿಕೊಂಡಿದೆ. ಈ ಸಂಸ್ಥೆಯು ಬೇರೆ ವಿಮಾನ ನಿಲ್ದಾಣಗಳಲ್ಲೂ ದುಬಾರಿ ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಮಂಗಳೂರು ನಿಲ್ದಾಣದಲ್ಲಿ ದುಬಾರಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿರುವ ಘಟನೆಗೆ ಸಂಬಂಧಿಸಿ ಗುತ್ತಿಗೆ ವಹಿಸಿರುವ ಏಜೆನ್ಸಿಗೆ ನೋಟಿಸ್ ನೀಡಲಾಗಿದೆ. ಜತೆಗೆ ದಂಡವನ್ನೂ ವಿಧಿಸಲಾಗಿದೆ ಎಂದರು.