Karavali
ಕೈರಂಗಳ: ಗೋವು ಕಳೆದುಕೊಂಡವರ ಕಣ್ಣೀರ ಕಥೆ- ಪ್ರಕರಣ ಸಿಸಿಬಿಗೆ ಹಸ್ತಾಂತರ
- Tue, Apr 03 2018 05:37:13 PM
-
ಕೊಣಾಜೆ, ಏ 03 : ‘ಕಳೆದ ಹತ್ತು ವರ್ಷದಲ್ಲಿ ಸುಮಾರು 35 ಗೋವುಗಳನ್ನು ಕಳೆದುಕೊಂಡಿದ್ದೇನೆ. ಮನಸ್ಸಿಗೆ ತುಂಬಾ ನೋವಾಗುತ್ತಿದೆ, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಮೇಯಲು ಯಾಕೆ ಬಿಡುತ್ತೀರಿ ಎಂದು ಬೈಯ್ದು ನಮ್ಮನ್ನು ವಾಪಸ್ಸು ಕಳುಹಿಸುತ್ತಾರೆಯೇ ಹೊರತು ದನಕಳವು ನಡೆಸಿದವರನ್ನು ಹುಡುಕುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಕೊಣಾಜೆ ನಡುಪದವು ನಿವಾಸಿ ಸುಮಾರು 65 ರ ಹರೆಯದ ಹೈನುಗಾರಿಕೆ ನಡೆಸುತ್ತಿರುವ ಕಲ್ಯಾಣಿ ಅಲವತ್ತುಕೊಂಡರು.
ಗೋ ದರೋಡೆಗೈದವರ ಪತ್ತೆಗಾಗಿ ಟಿ.ಜಿ.ರಾಜಾರಾಂ ಭಟ್ ನೇತೃತ್ವದಲ್ಲಿ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಕೈಗೊಳ್ಳಲಾದ ಅಮರಣಾಂತ ಉಪವಾಸ ಸತ್ಯಾಗ್ರಹದ ಮೂರನೇ ದಿನವಾದ ಮಂಗಳವಾರ ನಡೆದ ಗೋ ಸಂತ್ರಸ್ತರ ಸಭೆಯಲ್ಲಿ ನೊಂದವರ ಮಾತು ಕೇಳಿಬಂತು.
ಗೋಕಳ್ಳರ ಅಟ್ಟಹಾಸಕ್ಕೆ ಜಗ್ಗದೆ ಇದೀಗ 6 ಹಸುವನ್ನು ಮನೆಯಲ್ಲಿ ಸಾಕುತ್ತಿದ್ದೇನೆ ಆದರೆ ಅದನ್ನು ಯಾವ ಕಟುಕ ಬಂದು ಕದ್ದುಕೊಂಡು ಹೋಗುತ್ತಾನೆ ಅನ್ನುವ ಭಯವೂ ಮನದಲ್ಲಿದೆ. ರಾತ್ರಿ ಮಲಗಿರುವ ಸಂದರ್ಭದಲ್ಲಿ ಗೋ ಹಂತಕರು ಬಂದು ಸ್ವಂತ ಮಗುವಿನಂತೆ ಸಾಕಿದ ಹಸುಗಳನ್ನು ಕದ್ದು ಕೊಂಡು ಹೋಗಿದ್ದಾರೆ. ಗೋ ಕಳ್ಳರನ್ನು ಆದಷ್ಟು ಬೇಗ ಹುಡುಕಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕಣ್ಣೀರಿಟ್ಟರು.
ಕೊಣಾಜೆ ನಿವಾಸಿ ಅಬೂಬಕರ್ ಎಂಬವರು ಮಾತನಾಡಿ ಎರಡು ಹಸುಗಳು ನೀಡುತ್ತಿದ್ದ ಹಾಲು ಮನೆಮಂದಿಗೆ ಮಾತ್ರವಲ್ಲ, ಮಾರಾಟ ನಡೆಸಿಯೂ ಜೀವನ ನಿರ್ವಹಿಸುತ್ತಿದ್ದೆವು. ಆದರೆ ಮಾ.29 ರಂದು ಹಟ್ಟಿಗೆ ನುಗ್ಗಿದ ಗೋಕಳ್ಳರು ಎರಡು ಹಸುವಿನ ಹಗ್ಗ ತುಂಡರಿಸಿ ಕೊಂಡೊಯ್ದು, ಜೀವನದ ಆಧಾರವನ್ನೇ ಕಸಿದಿದ್ದಾರೆ. ತಮ್ಮ ಮಕ್ಕಳಂತೆ ಸಲಹುತ್ತಿದ್ದ ಹಸುವಿನ ಕಳವಿನ ನಂತರ ಮಡದಿ ರಾತ್ರಿಯಿಡೀ ನಿದ್ರಿಸದೆ ಅಳುತ್ತಲೇ ಇದ್ದಾಳೆ . ಹಸು ಕಳವಿನ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಈವರೆಗೂ ಯಾವುದೇ ಸುಳಿವು ದೊರೆತಿಲ್ಲ ಎಂದು ಕಣ್ಣೀರಿಟ್ಟರು.
ಎಂಟು ವರ್ಷಗಳಲ್ಲಿ ಎಂಟು ದನ ಕಳವು !
ಮುಡಿಪು ಸಂಬಾರುತೋಟದ ಕೃಷಿಕ ಮಾರ್ಷೆಲ್ ಡಿಸೋಜ ಅವರು ಸಾಕುತ್ತಿರುವ ಎಂಟು ಜಾನುವಾರುಗಳನ್ನು ಎಂಟು ವರ್ಷಗಳಿಂದ ಕಳವು ನಡೆಸುತ್ತಲೇ ಬಂದಿದ್ದಾರೆ. 2011 ರಿಂದ2018 ರವರೆಗೆ 8 ಹಸುಗಳನ್ನು ಕಳವು ನಡೆಸಲಾಗಿದೆ. ಕೊನೆಯ ಕಳವು ಹಟ್ಟಿಯಿಂದ ನಡೆಸುವ ಸಂದರ್ಭ ಆರೋಪಿಗಳ ಪೈಕಿ ಮಲಾರ್ ಸತ್ತಾರ್ ಮತ್ತು ಮಲಾರ್ ಮೋನು ಎಂಬವರನ್ನು ಗುರುತಿಸಿದ್ದೇನೆ. ಕೊಣಾಜೆ ಪೊಲೀಸ್ ಠಾಣೆಯಲ್ಲೂ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದೆವು. ಪೊಲೀಸರು ಸ್ಪಂಧಿಸುವಷ್ಟರಲ್ಲಿ ಕಳವುಗೈದ ಜಾನುವಾರು ಮಾಂಸ ಮಾಡಲಾಗಿತ್ತು. ಆದರೂ ಸಂಶಯಿತರಲ್ಲಿ ಓರ್ವ ಗೋರಿ ಮೇಲೆ ಪ್ರಮಾಣ ಮಾಡಿ ಕೃತ್ಯದಲ್ಲಿ ಭಾಗಿಯಾಗಿಲ್ಲ ಅನ್ನುತ್ತಾ ಬಚಾವಾಗಿದ್ದಾನೆ. ಜನಪ್ರತಿನಿಧಿಗಳ ಒತ್ತಡದಿಂದಲೂ ಪೊಲೀಸರು ಸರಿಯಾದ ವಿಚಾರಣೆ ಕೈಗೊಳ್ಳದೆ ಗೋಕಳ್ಳರನ್ನು ಬಿಡುತ್ತಲೇ ಇದ್ದಾರೆ ಎಂದು ಸಂಬಾರುತೋಟದ ಮಾರ್ಷೆಲ್ ಡಿಸೋಜ ಅಲವತ್ತುಕೊಂಡರು.
ಮೋಂಟುಗೋಳಿಯ ಚಂದ್ರಹಾಸ ಶೆಟ್ಟಿಯವರ ಎಂಟು ಜಾನುವಾರುಗಳನ್ನು ಎರಡು ವರ್ಷಗಳಲ್ಲಿ ಕಳವು ನಡೆಸಲಾಗಿದೆ. ಕೃಷಿಕರಾದ ಅವರು ಹೈನುಗಾರಿಕೆಯನ್ನು ನಡೆಸುತ್ತಾ ಬಂದಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಸ್ಪಂಧನೆ ಸಿಕ್ಕಿಲ್ಲ ಎಂದರು.ಸತ್ಯಾಗ್ರಹವನನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ ಗೋವು ಹಂತಕರನ್ನು ಬಂಧಿಸುವವರೆಗೂ ಸತ್ಯಾಗ್ರಹವನ್ನು ನಿಲ್ಲಿಸಬಾರದು. ಅಂತಿಮ ಗೆಲುವು ಸಿಗುವರೆಗೂ ಸರದಿಯಾಗಿ ಸತ್ಯಾಗ್ರಹವನ್ನು ನಡೆಸಬೇಕಾಗಿದೆ. ರಾಜಾರಾಂ ಭಟ್ ಮಾಡುವ ಈ ಸತ್ಯಾಗ್ರಹಕ್ಕೆ ನನ್ನ ಬೆಂಬಲವಿದ್ದು. ಎಲ್ಲರೂ ಒಂದೆ ಸಮಯಕ್ಕೆ ಉಪವಾಸ ಮಾಡುವುದರ ಬದಲು ಪೊಲೀಸರು ಹಂತಕರನ್ನು ಇನ್ನು ಹಿಡಿಯದೇ ಇದ್ದಲ್ಲಿ, ಸುದೀರ್ಘ ಉಪವಾಸದಿಂದ ಭಟ್ ಆರೋಗ್ಯದಲ್ಲಿ ಏರುಪೇರಾದಲ್ಲಿ ಉಳಿದವರು ಸತ್ಯಾಗ್ರಹದಲ್ಲಿ ತೊಡಗಿಸಿಕೊಳ್ಳಬೇಕಿದೆ. ಒಟ್ಟಾಗಿ ಜಾನುವಾರು ಕಳ್ಳರು ಸಿಗುವವರೆಗೂ ಹೋರಾಟ ನಿರಂತರವಾಗಿ ಮುಂದುವರಿಯಬೇಕಿದೆ. ಈ ಮೂಲಕ ನ್ಯಾಯ ದೊರಕಿಸಿಕೊಡಬೇಕಿದೆ ಎಂದರು.
ಕೊಣಾಜೆಯ ಬಾಬು ಮುಗೇರ -6, ಶ್ರೀಧರ್ ಭಟ್ ಕೈರಂಗಳ-1, ಕೊಣಾಜೆಯವರಾದ ಕೃಷ್ಣ ಭಟ್-1, ರಾಮಚಂದ್ರ ಭಟ್ 2 ಕಮಲಾಕ್ಷ ಅವರದ್ದು ಒಂದು ವರ್ಷದಲ್ಲಿ ನಾಲ್ಕು, ಲಲಿತಾ-4, ಶಂಕರಿಯಮ್ಮ-2, ಅರ್ಕಾನದ ಸಿರಿಲ್ ಕುಟಿನ್ಹಾ-4, ಕುರ್ನಾಡು ಕೊಡಕ್ಕಲ್ನ ಶಂಕರಭಟ್ -1, ಚಂದ್ರಶೇಖರ ಕಲ್ಲಾಪು-1 ಇಷ್ಟೂ ಮನೆಯವರು ತಮ್ಮ ಮನೆಯಿಂದ ಜಾನುವಾರು ಕಳವು ನಡೆಸಿರುವ ಅಳಲನ್ನು ತೋಡಿಕೊಂಡರು. ಯಾರಿಗೂ ಸರಕಾರ ಪರಿಹಾರವನ್ನಾಗಲಿ , ಇಲಾಖೆ ಆರೋಪಿಗಳನ್ನಾಗಲಿ ಹಿಡಿದುಕೊಟ್ಟಿಲ್ಲ ಎಂದು ಆರೋಪಿಸಿದರು.
ಸಮಾವೇಶದಲ್ಲಿ ಬಾವುಕರಾಗಿ ಕಣ್ಣೀರಿಟ್ಟ ಅಮೃತಧಾರಾ ಗೋಶಾಲೆಯ ಮುಖ್ಯಸ್ಥ ಟಿ.ಜಿ.ರಾಜಾರಾಂ ಭಟ್ ಅವರು ಸರಕಾರ ಪೊಲೀಸರ ಜೊತೆ ಮಾತುಕತೆ ನಡೆಸಿ ಪ್ರತಿಭಟನೆಯನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ. ನಾನು ನಿಜವಾದ ಗೋಹಂತಕರನ್ನು ಹಿಡಿಯುವರೆಗೆ ಯಾವುದೇ ಕಾರಣಕ್ಕೂ ಸತ್ಯಗ್ರಹವನ್ನು ನಿಲ್ಲಿಸುವುದಿಲ್ಲ. ಗೋ ಕಳ್ಳತನ ಅನ್ನುವುದು ಕ್ಯಾನ್ಸರ್ ನಂತೆ ಬೆಳೆಯುತ್ತಿದೆ. ಹಾಲು ಕೊಡುವ ಹಸುಗಳನ್ನು ಕಟುಕರು ಕದ್ದುಕೊಂಡು ಹೋಗಿ ಅದನ್ನು ಕಡಿಯುವ ಹೇಯ ಕೃತ್ಯವನ್ನು ನಡೆಸುತ್ತಿದ್ದಾರೆ. ಗೋವನ್ನು ಸಾಕುವವನಿಗೆ ಮಾತ್ರ ಗೊತ್ತು ಗೋವನ್ನು ಕಳಕೊಂಡ ನೋವು. ಕೊಣಾಜೆ ವ್ಯಾಪ್ತಿಯಲ್ಲಿ ಗೋ ಕಳ್ಳತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಡಿಪು ಪ್ರದೇಶದಲ್ಲಿ ಹೆಣ್ಣು ಮಕ್ಕಳು ನಡೆದಾಡಲು ಹೆದರುವಂತ ಸ್ಥಿತಿ ನಿರ್ಮಾಣವಾಗುತ್ತಿದೆ. ಗಾಂಜಾ, ದರೋಡೆ, ಕಳ್ಳತನದಂತಹ ಕೌರ್ಯಗಳು ಹೆಚ್ಚಾಗಿ ಆರಂಭವಾಗಿದೆ. ಇದಕ್ಕೆ ಅಂತ್ಯವನ್ನು ಹಾಡಬೇಕಿದೆ ಎಂದ ಅವರು ಗೋವು ಹಂತಕನ್ನು ಹಿಡಿಯದೇ ಪಕ್ಷದಲ್ಲಿ ನಾನು ಸಾಯುವವರೆಗೂ ಹೋರಾಟವನ್ನು ನಡೆಸುತ್ತೇನೆ ಎಂದು ಭಾವುಕರಾಗಿ ಕಣ್ಣೀರಿಟ್ಟರು.
ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ ಜಿಲ್ಲೆಯಲ್ಲೇ ಪ್ರಥಮ ಬಾರಿ ಇಂತಹ ಪ್ರತಿಭಟನೆ ನಡೆಯುತ್ತಿದೆ. ಅಕ್ರಮ ಗೋಸಾಗಾಟಕ್ಕೆ ಅಂತ್ಯ ಹಾಡಬೇಕಿದೆ. ಜಿಲ್ಲೆಯ ಪ್ರತಿಯೊಬ್ಬರ ಪರವಾಗಿ ರಾಜಾರಾಂ ಭಟ್ ಪ್ರತಿಭಟನೆ ನಡೆಸುತ್ತಿದ್ದಾರೆ. 19 ಜನರ ನೋವನ್ನು ಸಭೆಯಲ್ಲಿ ಕೇಳಿದ್ದೇವೆ. ಮುಂದೆ ಇಂತಹ ನೋವನ್ನು ಜನ ಅನುಭವಿಸಬಾರದು ಅನ್ನುವ ಉದ್ದೇಶದಿಂದ ಭಟ್ ಅವರ ಸತ್ಯಾಗ್ರಹದಲ್ಲಿ 24 ಮಂದಿ ಪಾಲ್ಗೊಳ್ಳುವ ಬೆಂಬಲ ಸೂಚಿಸಿದ್ದಾರೆ. ಪೊಲೀಸರ ಕಾರ್ಯಪ್ರವೃತ್ತಿ ನೋಡಿದಾಗ ಪ್ರತಿಭಟನೆಯ ಕಾವು ಸರಕಾರಕ್ಕೆ ತಟ್ಟಿದಂತಿದೆ. ಆರೋಪಿಗಳನ್ನು ಹಿಡಿಯದೇ ಇದ್ದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಕರಣ ಸಿಸಿಬಿಗೆ ಹಸ್ತಾಂತರ
ಮೂರನೇ ದಿನಕ್ಕೆ ಕಾಲಿಟ್ಟ ಅಮರಣಾಂತ ಉಪವಾಸಕ್ಕೆ ಮಣಿದ ಪೊಲೀಸ್ ಇಲಾಖೆ ಪ್ರಕರಣವನ್ನು ಕೊಣಾಜೆ ಪೊಲೀಸರಿಂದ ಸಿಸಿಬಿಗೆ ವಹಿಸಿದೆ. ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರ ತಂಡ ಮಂಗಳವಾರ ಅಮೃತಧಾರಾ ಗೋಶಾಲೆಗೆ ಭೇಟಿ ನೀಡಿ ಗೋ ದರೋಡೆ ನಡೆಸುವ ಸಂದರ್ಭ ಆಶ್ರಮದಲ್ಲಿದ್ದ ವಿಶ್ವನಾಥ್ ಮತ್ತು ಟಿ.ಜಿ.ರಾಜಾರಾಂ ಭಟ್ ಅವರಿಂದ ಮಾಹಿತಿಯನ್ನು ಸಂಗ್ರಹಿಸಿದೆ. ಅಲ್ಲದೆ ದರೋಡೆಕೋರನನ್ನು ನೋಡಿದ್ದ ವಿಶ್ವನಾಥ್ ಅವರ ಜತೆಗೆ ಕೇರಳದ ಮಂಜೇಶ್ವರದಲ್ಲಿರುವ ಸಂಶಯಿತ ಆರೋಪಿಗಳಿಗಾಗಿ ಹುಡುಕಾಟ ನಡೆಸಿದೆ.ಮನೆಗೆ ದಾಳಿ
ಸಿಸಿಬಿ ತಂಡ ಮಂಜೇಶ್ವರದ ಕಜ್ಜೆಪದವು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದೆ. ಈ ವೇಳೆ ದೊಡ್ಡ ಗಾತ್ರದ ದನದ ರುಂಡವನ್ನು ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿದ್ದ ಮೂವರನ್ನು ಸಿಸಿಬಿ ತಂಡ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.