ಉಡುಪಿ, ಜೂ 21 (DaijiworldNews/PY) : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಓರ್ವ ಸಾವನ್ನಪ್ಪಿ, ಮತ್ತೋರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಭಾನುವಾರ ಬಾರಕೂರು ಚೌಳಿಕೆರೆ ಬಳಿ ನಡೆದಿದೆ.











ಮೃತಪಟ್ಟವರನ್ನು ಬೀಜಾಡಿ ಫ್ಲೈವುಡ್ ಅಂಗಡಿ ಮಾಲಕ, ವಕ್ವಾಡಿ ನಿವಾಸಿ ಸಂತೋಷ ಶೆಟ್ಟಿ(40) ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಮಹಿಳೆಯನ್ನು ವಕ್ವಾಡಿಯ ಶ್ವೇತಾ(23) ಎನ್ನಲಾಗಿದೆ. ಇವರು ಸಂತೋಷ್ ಶೆಟ್ಟಿ ಅವರ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಸದ್ಯ ಇವರು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾರಕೂರು ಕಡೆಯಿಂದ ಸಾಬರಕಟ್ಟೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ತಡೆಗೋಡೆ ಇಲ್ಲದ ಚೌಳಿಕೆರೆಗೆ ಉರುಳಿ ಬಿದ್ದಿದೆ ಎನ್ನಲಾಗಿದೆ. ತಕ್ಷಣವೇ ಸ್ಥಳೀಯರು ಕಾರಿನಲ್ಲಿದ್ದ ಸಂತೋಷ ಶೆಟ್ಟಿ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಂತೋಷ ಶೆಟ್ಟಿ ಅವರು ಮೃತಪಟ್ಟರೆನ್ನಲಾಗಿದೆ.
ಘಟನೆಯ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.