ಬೆಳ್ತಂಗಡಿ, ಜೂ 21 (DaijiworldNews/SM): ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಹೇರಿರುವ ನಿಯಮಗಳನ್ನು ಸರಕಾರಿ ಕಚೇರಿಗಳಲ್ಲಿ ಪಾಲಿಸಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಲೋಕಾಯುಕ್ತ ಮಂಗಳೂರು ವಿಭಾಗದ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಬೆಳ್ತಂಗಡಿಯ ವಿವಿಧ ಸರಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದರು.

ಬೆಳ್ತಂಗಡಿ ಮಿನಿ ಮಿನಿವಿಧಾನಸೌಧದಲ್ಲಿರುವ ತಾಲೂಕು ಕಚೇರಿ, ಕೊಕ್ಕಡ, ವೇಣೂರು, ಬೆಳ್ತಂಗಡಿ ಹೋಬಳಿಯ ಕಂದಾಯ ನಿರೀಕ್ಷಕರ ಕಚೇರಿ, ನಗರ ಪಂಚಾಯತ್, ಬಸ್ ನಿಲ್ದಾಣ, ಕೃಷಿ ಹೋಬಳಿ ಕೇಂದ್ರ, ಪಣಕಜೆ ಹಿ.ಪ್ರಾ. ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-೧೯ ಅನ್ವಯ ನಿಯಮ ಪಾಲಿಸುತ್ತಿರುವ ಕುರಿತು ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಪ.ಪಂ. ಅಧಿಕಾರಿ, ಸಿಬಂದಿಗಳು ಮಾಸ್ಕ್ ಧರಿಸದೇ ಇರುವುದು ಸೇರಿದಂತೆ ಸಾರ್ವಜನಿಕರೋರ್ವರು ಮಾಸ್ಕ್ ಧರಿಸದೇ ಸಿಬ್ಬಂದಿಯೊಂದಿಗೆ ವ್ಯವಹರಿಸುತ್ತಿದ್ದು ಕಂಡುಬಂದ ಕುರಿತು ಡಿವೈಎಸ್ಪಿ ಕಲಾವತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣದಿಂದಲೇ ಪ್ರತಿ ಸಿಬ್ಬಂದಿ ಮಾಸ್ಕ್ ಧರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು.
ಸಾರ್ವಜನಿಕ ಪ್ರದೇಶದಲ್ಲಿ ಉಗುಳುವವರ ಮತ್ತು ಮಾಸ್ಕ್ ಧರಿಸದೇ ಇರುವವರ ವಿರುದ್ಧ ಪ.ಪಂ. ಎಷ್ಟು ಪ್ರಕರಣ ದಾಖಲಿಸಿವೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ, ಥರ್ಮಲ್ ಸ್ಕ್ಯಾನಿಂಗ್, ಸಾರ್ವಜನಿಕ ಕಚೇರಿಗೆ ಬರುವಾಗ ಪಾಲಿಸಬೇಕಾದ ನಿಯಮ ಸೇರಿದಂತೆ ಸರಕಾರ ಜಾರಿಗೆ ತಂದಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆಗೆ ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಲೋಕಾಯುಕ್ತ ಎಚ್.ಸಿ.ಗಳಾದ ವೇಣುಗೋಪಾಲ್ ಹಾಗೂ ಪ್ರದೀಪ್ ಜತೆಗಿದ್ದರು.