ಮಂಗಳೂರು ಸೆ20: ಇಲ್ಲಿನ ನಾಗುರಿಯಲ್ಲಿ ನೂತನವಾಗಿ ಆರಂಭಗೊಂಡ ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಇಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದ್ದಾರೆ. ಪೊಲೀಸರ ಧ್ವಜ ವಂದನೆ ಸ್ವೀಕರಿಸಿದ ಬಳಿಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಾಡಿಗೆ ಪಡೆದುಕೊಂಡಿರುವ ಖಾಸಗಿ ಮನೆಯೊಂದರಲ್ಲಿ ಈ ಪೊಲೀಸ್ ಠಾಣೆ ಇಂದಿನಿಂದ ತನ್ನ ಕಾರ್ಯರಂಭ ಮಾಡಲಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಠಾಣೆಯ ವ್ಯಾಪ್ತಿಗೆ ಉಳ್ಳಾಲ, ಕೊಣಾಜೆ, ಕಂಕನಾಡಿ ನಗರ ಮತ್ತು ಮಂಗಳೂರು ಗ್ರಾಮಾಂತರ ಸೇರಲಿದೆ. ಹೊಸ ಠಾಣೆ ಸೇರ್ಪಡೆಯಿಂದ ಮಂಗಳೂರು ವ್ಯಾಪ್ತಿಯ ಒಟ್ಟು ಸಂಚಾರ ಠಾಣೆಗಳ ಸಂಖ್ಯೆ ನಾಲ್ಕಕ್ಕೇರಿದೆ.
ಉದ್ಘಾಟನಾ ಸಮಾರಂಭದಲ್ಲಿ ಎಡಿಜಿಪಿ ಅಲೋಕ್ ಮೋಹನ್, ಐಜಿಪಿ ಹೇಮಂತ್ ನಿಂಬಾಳ್ಕರ್, ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ಡಿಸಿಪಿ ಹನಮಂತರಾಯ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಖಾತೆ ಸಚಿವ ಯು.ಟಿ.ಖಾದರ್, ಶಾಸಕರಾದ ಮೊಯ್ದೀನ್ ಬಾವ, ಜೆ.ಆರ್.ಲೋಬೋ, ಮೇಯರ್ ಕವಿತಾ ಸನಿಲ್ ಮೊದಲಾದ ಗಣ್ಯರು ಭಾಗವಹಿಸಿದ್ದರು.