ಬಂಟ್ವಾಳ, ಜೂ. 21 (DaijiworldNews/SM): ಜಾನುವಾರುಗಳನ್ನು ಅಕ್ರಮ ಕಸಾಯಿಖಾನೆಗೆ ರವಾನಿಸುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಾಟ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ. ಪ್ರಸನ್ನ ನೇತೃತ್ವದ ತಂಡ ಜಾನುವಾರುಗಳ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಸರಪಾಡಿಯಲ್ಲಿ ನಡೆದಿದೆ.


ವಾಹನ ಚಾಲಕ ಆರೋಪಿ ಮೊಹಮ್ಮದ್ ಹನೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ಇಬ್ರಾಹಿಂ ಮತ್ತು ಬಾಲಕೃಷ್ಣ ಪೂಜಾರಿ ಅವರ ವಿರುದ್ಧ ಗೋವಧೆ ಪ್ರತಿಬಂಧಕ ಕಾಯಿದೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳಿಂದ ಒಂದು ದನ, ಒಂದು ಹೋರಿ, ಒಂದು ಗಂಡು ಕರು ಹಾಗೂ ಒಂದು ಹೆಣ್ಣು ಕರು ಸಹಿತ 2 ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸರಪಾಡಿ ಬೀಯಪಾದೆ ಎಂಬಲ್ಲಿ ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನಗಳನ್ನು ತುಂಬಿಸಿಕೊಂಡು ಅಜ್ಞಾತ ಸ್ಥಳದಲ್ಲಿ ವಧೆ ಮಾಡಲು ಸಾಗಾಟ ಮಾಡುವ ವೇಳೆ ರೆಡ್ ಹ್ಯಾಂಡ್ ಅಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಣ್ಣೂರು ಬಿರ್ಪುಗುಡ್ಡೆ ಇಬ್ರಾಹಿಂ ಎಂಬವರು ಕೊಟ್ಟುಂಜ ಬಾಲಕೃಷ್ಣ ಪೂಜಾರಿ ಅವರಿಂದ ಖರೀದಿ ಮಾಡಿದ ಜಾನುವಾರುಗಳನ್ನು ಪರವಾನಿಗೆ ರಹಿತವಾಗಿ ಪಿಕಪ್ ವಾಹನ ಚಾಲಕ ಮಹಮ್ಮದ್ ಹನೀಫ್ ವದೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ. ಪೊಲೀಸರ ಸಕಾಲಿಕ ಸಮಯ ಪ್ರಜ್ಞೆಯಿಂದ ಗೋ ವಧೆ ತಪ್ಪಿದಂತಾಗಿದೆ.