ಮಂಗಳೂರು, ಜೂ 22(DaijiworldNews/PY) : ಪರೀಕ್ಷೆಗೆ ಹಾಲ್ ಟಿಕೆಟ್ ಪಡೆದುಕೊಳ್ಳಲು ಹೋಗಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಾಪತ್ತೆಯಾದ ವಿದ್ಯಾರ್ಥಿನಿಯನ್ನು ಭೀಮವ್ವ ಅಲಿಯಾಸ್ ಸುಜಾತಾ (16) ಎನ್ನಲಾಗಿದೆ.
ತನ್ನ ಶಾಲೆಯಿಂದ ಪರೀಕ್ಷೆಗೆ ಹಾಲ್ ಟಿಕೆಟ್ ಪಡೆದುಕೊಂಡು ಮನೆಗೆ ಬರುತ್ತೇನೆ ಎಂದು ತಿಳಿಸಿದ್ದಳು. ಆದರೆ, ಆಕೆ ಮನೆಗೆ ವಾಪಾಸ್ಸಾಗಲಿಲ್ಲ.
ಅವಳನ್ನು ಪತ್ತೆ ಹಚ್ಚುವ ಪ್ರಯತ್ನ ವ್ಯರ್ಥವಾಗಿದೆ ಎಂದು ಆಕೆಯ ಮನೆಯವರು ತಿಳಿಸಿದ್ದಾರೆ.
ಸುಜಾತಾ ಮನೆಯಿಂದ ಹೊರಡುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದಳು. ಆಕೆ 5'1 ಎತ್ತರವಾಗಿದ್ದು, ಸಾಮಾನ್ಯ ಮೈಬಣ್ಣ ಹೊಂದಿದ್ದಾಳೆ. ಉದ್ದನೆಯ ಮುಖ ಹೊಂದಿದ್ದಾಳೆ. ಆಕೆ ಕನ್ನಡ ಹಾಗೂ ತುಳು ಭಾಷೆ ಬಲ್ಲವಳಾಗಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದಲ್ಲಿ ಕೂಡಲೇ ತಿಳಿಸುವಂತೆ ಕದ್ರಿ ಠಾಣಾಧಿಕಾರಿ ಹೇಳಿದ್ದಾರೆ.