ಮಂಗಳೂರು, ಜೂ 22 (Daijiworld News/MSP): ಕೊರೊನಾ ಲಾಕ್ ಡೌನ್ ನಿಂದ ಉಂಟಾದ ಪರಿಸ್ಥಿತಿಯಲ್ಲಿ ಎಲ್ಲರೂ ನರಕಯಾತನೆ ಅನುಭವಿಸಿದ್ದು, ಸರ್ಕಾರ ಪರಿಹಾರವನ್ನು ನಾಮಕಾವಸ್ಥೆಗೆ ಘೋಷಣೆ ಮಾಡಿದೆ ಎಂದು ಜೆಡಿಎಸ್ ಮುಖಂಡ, ಎಸ್.ಎಲ್.ಬೋಜೇಗೌಡ ಆರೋಪಿಸಿದ್ದಾರೆ.


ನಗರದಲ್ಲಿ ಜೂ.22 ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು," ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವು ಸಂಪೂರ್ಣ ಬೆಂಬಲ ನೀಡಿದ್ದೇವು. ಆದರೆ ಸಮರ್ಪಕ ಆಡಳಿತ ನೀಡಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಕೊರೊನಾ ಪರಿಸ್ಥಿತಿ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಎಡವಿದೆ ಎಂದರು.
ಸರ್ಕಾರದ ವೈಫಲ್ಯದ ಪರಿಣಾಮ ಕೂಲಿಕಾರ್ಮಿಕರು, ಬಡವರು ಸಂಕಷ್ಟದಲ್ಲಿದ್ದಾರೆ. ಕಷ್ಟಪಟ್ಟು ಬೆಳೆದ ತರಕಾರಿ, ಹೂ ಬೆಳೆಗಳು ನಾಶ ಆಗಿವೆ. ಕಾರ್ಮಿಕರು, ರಿಕ್ಷಾ ಡ್ರೈವರ್ ಗಳ ಕೈಗೆ ಇನ್ನೂ ರಾಜ್ಯ ಸರ್ಕಾರ ಘೋಷಿಸಿದ ಪರಿಹಾರ ಸಿಕ್ಕಿಲ್ಲ. ರೈತರಿಗೆ ಸರ್ಕಾರ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ, ಅವರ ರಕ್ಷಣೆ ಮುಂದಾಗಲಿಲ್ಲ. ಇನ್ನು ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ಘೋಷಣೆ ಮಾಡಿ ನಂತರ ಪರಿಹಾರ ಘೋಷಣೆ ಮಾಡಿ ಹಣ ಇಲ್ಲ ಎಂದು ಹೇಳುವುದು ಸರಿ ಎಂದು ಸರ್ಕಾರದ ವಿರುದ್ದ ಆರೋಪಗಳ ಸುರಿಮಳೆಗೈದರು.
ಇವೆಲ್ಲಕ್ಕಿಂತಲೂ ಮುಖ್ಯವಾಗಿ ರಾಜ್ಯ ಸರ್ಕಾರಕ್ಕೆ ಕೊರೊನಾ ಸಂಕಷ್ಟದ ಸಮಯದಲ್ಲಿ ಅಗತ್ಯವಿರುವ ವೆಂಟಿಲೇಟರ್ ಖರೀದಿಸಲು ಈಗಲೂ ಸಾಧ್ಯವಾಗಿಲ್ಲ. ಇದಲ್ಲದೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳು ಸ್ಥಾಪನೆ ಮಾಡಲು ಸಾಧ್ಯವಾಗಿಲ್ಲ ಎಂದು ದೂರಿದರು.
ಆರ್ಥಿಕ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದು ,ಸಹಕಾರಿ ಬ್ಯಾಂಕ್ ಗಳನ್ನು ಉಳಿಸಲು ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದು ಹೇಳಿದರು.