ಮಂಗಳೂರು, ಏ 04: ರಾಜಕಾರಣಿಗಳಿಗೆ ಮಾತ್ರ ನೀತಿಸಂಹಿತೆಯ ಬಿಸಿ ಜೋರಾಗಿಯೇ ತಟ್ಟುತ್ತೆ, ಅಂದ್ರೆ ಕರಾವಳಿಯಲ್ಲಿ ಯಕ್ಷಗಾನದ ಜತೆಗೆ ಯಕ್ಷಗಾನದ ಸಂಭಾಷಣೆಗೂ ನೀತಿಸಂಹಿತೆ ಬಿಸಿ ತಟ್ಟಿದೆ. ಹೌದು ಕರಾವಳಿಯ ಗಂಡು ಕಲೆಯಾದ ಯಕ್ಷಗಾನದಲ್ಲಿ ಯಾವುದೇ ಪಕ್ಷ ಅಥವಾ ರಾಜಕಾರಣಿಯನ್ನು ಟೀಕಿಸುವಂತಿಲ್ಲ ಎಂದು ಖಡಕ್ ಆಗಿ ಸೂಚನೆ ಕೊಟ್ಟಿರುವ ಚುನಾವಣಾ ಆಯೋಗ ಮೇಳವೊಂದಕ್ಕೆ ನೋಟಿಸ್ ಜಾರಿ ಮಾಡಿದೆ.
ಮಾ. 24 ರಂದು ಕಾಸರಗೋಡು ಜಿಲ್ಲೆಯ ಮಾನ್ಯದಲ್ಲಿ ನಡೆದ ದೇವಿ ಮಹಾತ್ಮೆ ಪ್ರದರ್ಶನದಲ್ಲಿ ಕಲಾವಿದರು ಸಂಭಾಷಣೆ ಮಾಡುವಾಗ ಇವನರ್ವ ಇವನರ್ವ ಪದ ಬಳಕೆ ಮಾಡಿದ್ದು ಇದರ ತುಣುಕು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಸುದ್ದಿಯಾಗುತ್ತಿದ್ದಂತೆ ಚುನಾವಣಾ ಆಯೋಗದ ಕಣ್ಣು ಯಕ್ಷಗಾನದ ಮೇಲೂ ಬಿದ್ದಿದೆ. ರಾಜ್ಯ ಹಾಗೂ ಜಿಲ್ಲಾ ಚುನಾವಣೆ ಆಯೋಗ ಕಚೇರಿಯಿಂದ ಸಂಬಂಧಪಟ್ಟ ಮೇಳದ ಮುಖ್ಯಸ್ಥರಿಗೆ ಮೊಬೈಲ್ ಕರೆ ಮಾಡಿ ಯಕ್ಷಗಾನ ಸಂಭಾಷಣೆಯಲ್ಲಿ ಇವನರ್ವ ಪದ ಬಳಕೆ ಮಾಡಿದ ಕಾರಣಕ್ಕಾಗಿ ಆ ಯಕ್ಷಗಾನ ಪ್ರದರ್ಶನ ನಿಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ಯಕ್ಷಗಾನ ಕೇವಲ ಕಲೆಯಲ್ಲ, ಅದರ ಹಿಂದೆ ಧಾರ್ಮಿಕ ನಂಬಿಕೆಯೂ ಬೆಸೆದುಕೊಂಡಿದ್ದು, ಪ್ರದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಕಲಾವಿದರು ಸಂಭಾಷಣೆ ನಡೆಸುವಾಗ ಯಾವುದೇ ವ್ಯಕ್ತಿ , ರಾಜಕೀಯ ಧರ್ಮಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಬಾರದೆಂದು ಆರಂಭದಲ್ಲೆ ಸೂಚನೆ ನೀಡಿತ್ತೇವೆ. ಆದನ್ನು ಮೀರಿ ಕಲಾವಿದರು ನಡೆದುಕೊಂಡಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವು ಎಂದು ಉತ್ತರಿಸಿದ್ದಾರೆ. ಅಯೋಗದ ವಿರುದ್ದ ಅಸಮಧಾನ ವ್ಯಕ್ತಪಡಿಸಿರುವ ಯಕ್ಷಗಾನ ಕಲಾವಿದರು ಹಾಗೂ ಅಭಿಮಾನಿಗಳು ಇವನರ್ವ ಶಬ್ದ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಆದರೂ ಕೂಡಾ ಕಲಾವಿದರ ಮೇಲೆ ಪ್ರಹಾರ ಮಾಡಲು ಹೊರಟಿರುವುದು ಸರಿಯಾದ ನಿರ್ಧಾರವಲ್ಲ ಎಂದಿದ್ದಾರೆ.