ಮಂಗಳೂರು,ಜೂ 22 (Daijiworld News/MSP): ಬೇರೆ ಚಾಲಕನನ್ನು ನೇಮಿಸಿ ತನ್ನದೇ ಟ್ರ್ಯಾಕ್ಟರ್’ನಡಿ ಸಿಲುಕಿ ಮಾಲೀಕನೋರ್ವ ದುರಂತ ಅಂತ್ಯ ಕಂಡ ಘಟನೆ ಜೂ.22 ಸೋಮವಾರ ಮಧ್ಯಾಹ್ನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಹಾಕುವಕಲ್ಲು ಪುಣ್ಯಕೋಟಿ ನಗರದ ಬಳಿ ನಡೆದಿದೆ.

ಮೃತ ಮಾಲೀಕ ಗದಗ ಮೂಲದವನಾಗಿದ್ದು ಉಳಿದ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ತನ್ನ ಟ್ರ್ಯಾಕ್ಟರ್ ನಲ್ಲಿ ದುಡಿಯುತ್ತಿದ್ದ ಆತ ಇಂದು ಬೇರೆ ಕೆಲಸವಿದ್ದ ಕಾರಣ ಬದಲಿ ಚಾಲಕನನ್ನು ನೇಮಿಸಿಕೊಂಡಿದ್ದ ಎನ್ನಲಾಗಿದೆ . ಪುಣ್ಯಕೋಟಿ ನಗರದಲ್ಲಿನ ಮನೆಯೊಂದರ ಬಳಿ ರಸ್ತೆ ಅಗೆಯುವ ಕೆಲಸ ನಿರ್ವಹಿಸಿದ ಬದಲಿ ಚಾಲಕ ಒಳರಸ್ತೆಯಿಂದ ಮುಡಿಪು ಮಂಜನಾಡಿ ಸಂಪರ್ಕ ರಸ್ತೆಗೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದಂತೆಯೇ ಅದೇ ರಸ್ತೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಟ್ರ್ಯಾಕ್ಟರ್ ಮಾಲೀಕನಿಗೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು ನಿಯಂತ್ರಣ ಕಳೆದುಕೊಂಡ ಟ್ರ್ಯಾಕ್ಟರ್ ಬೈಕ್ ಸವಾರನ ತಲೆಯ ಮೇಲೆ ಚಲಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಣಾಜೆ ಹಾಗೂ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.