ಉಡುಪಿ, ಜೂ.21 (DaijiworldNews/MB) : ಭಾನುವಾರ ಸಂಜೆ ಬಾರ್ಕೂರಿನ ಚೌಳಿಕೆರೆಗೆ ಕಾರು ಬಿದ್ದು ಉದ್ಯಮಿ ಸಾವನ್ನಪ್ಪಿದ್ದರೆ, ವಕ್ವಾಡಿ ನಿವಾಸಿ ಶ್ವೇತಾ ನೀರಲ್ಲಿ ಮುಳುಗಿ ಅಸ್ವಸ್ಥರಾಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ 15 ವರ್ಷದ ಬಾಲಕಿ ನಮನಾ, ಶ್ವೇತಾ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು ಸ್ಥಳೀಯರೊಂದಿಗೆ ಸೇರಿ ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ್ದು ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


ಬಾರಕೂರು ಕಡೆಯಿಂದ ಸಾಬರಕಟ್ಟೆ ಕಡೆಗೆ ವಕ್ವಾಡಿಯ ಶ್ವೇತಾ (23) ಹಾಗೂ ಬೀಜಾಡಿ ಫ್ಲೈವುಡ್ ಅಂಗಡಿ ಮಾಲಕ, ವಕ್ವಾಡಿ ನಿವಾಸಿ ಸಂತೋಷ ಶೆಟ್ಟಿ(40) ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ತಡೆಗೋಡೆ ಇಲ್ಲದ ಚೌಳಿಕೆರೆಗೆ ಉರುಳಿ ಬಿದ್ದಿದ್ದು ಸಂತೋಷ್ ಶೆಟ್ಟಿ ಸಾವನ್ನಪ್ಪಿದ್ದರು. ಸ್ಥಳೀಯರು ನೀರಿಗೆ ಜಿಗಿದು ಶ್ವೇತಾರನ್ನು ಮೇಲಕ್ಕೆತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಸದ್ಯ ಶ್ವೇತಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಅವರು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ವೇತಾ ಅವರಿಗೆ ಆ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡದಿದ್ದಲ್ಲಿ ಬದುಕಿ ಉಳಿಯುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದು ನಮನ ಹಾಗೂ ಸ್ಥಳೀಯರು ಮಾಡಿದ ಕಾರ್ಯವನ್ನು ವೈದ್ಯರು ಶ್ಲಾಘಿಸಿದ್ದಾರೆ.
ಈ ಕುರಿತು ದಾಯ್ಜಿವಲ್ಡ್ ಜೊತೆ ಮಾತನಾಡಿದ ಬಾಲಕಿ ನಮನ, ''ಸದ್ದು ಕೇಳಿದ ಕೂಡಲೇ ನಾವು ಹೊರ ಬಂದು ನೋಡಿದಾಗ ಕೆರೆಗೆ ಕಾರು ಬಿದ್ದಿರುವುದು ಗಮನಕ್ಕೆ ಬಂದಿದ್ದು ಕೂಡಲೇ ಮನೆಯ ಬಾವಿಯ ಹಗ್ಗದ ಸಹಾಯದಿಂದ ಸ್ಥಳೀಯರು ಸೇರಿ ಮೇಲಕ್ಕೆತ್ತುವ ಪ್ರಯತ್ನ ಮಾಡಿದೆವು. ಬಳಿಕ ಕೆರೆಗೆ ಇಳಿದು ಕಾರಿನಿಂದ ಮೊದಲು ಅವರನ್ನು ರಕ್ಷಿಸಿದೆವು. ಎನ್ಸಿಸಿ ವಿದ್ಯಾರ್ಥಿಯಾದ ನನಗೆ ಪ್ರಥಮ ಚಿಕಿತ್ಸೆ ನೀಡುವ ಕುರಿತು ಮಾಹಿತಿ ಇದ್ದು ಪ್ರಥಮ ಚಿಕಿತ್ಸೆ ನೀಡಿ ಉಸಿರಾಟ ಆರಂಭವಾದ ಬಳಿಕ ಆಂಬುಲೆನ್ಸ್ನಲ್ಲಿ ಕಳುಹಿಸಿದೆವು. ಸಂತೋಷ್ ಅವರಿಗೂ ಪ್ರಥಮ ಚಿಕಿತ್ಸೆ ನೀಡಿದರು ಅದು ತಡವಾಗಿತ್ತು. ಇಲ್ಲಿ ತಡೆಗೋಡೆ ಇಲ್ಲದಿರುವುದೇ ಈ ಅಪಘಾತಗಳಿಗೆ ಕಾರಣ. ಅಲ್ಲಿ ಹಂಪ್ಸ್ ಇರಬೇಕು ಅಥವಾ ತಡೆಗೋಡೆ ನಿರ್ಮಾಣವಾಗಬೇಕು'' ಎಂದು ಹೇಳಿದ್ದಾರೆ.