ಕುಂದಾಪುರ,ಜೂ 22 (Daijiworld News/MSP): ಕುಂದಾಪುರ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯ (ಎಪಿಎಂಸಿ) ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಬೈಂದೂರಿನ ವೆಂಕಟ ಪೂಜಾರಿ ಸಸಿಹಿತ್ಲು ಅವಿರೋಧವಾಗಿ ಆಯ್ಕೆಗೊಂಡಿದ್ದು ಸೋಮವಾರ ಅವರು ಅಧಿಕಾರ ಸ್ವೀಕರಿಸಿದರು.



ನೂತನ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ವಸಂತಕುಮಾರ್ ಶೆಟ್ಟಿ ಕೆದೂರು ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ವೆಂಕಟ ಪೂಜಾರಿ ಅವರು, ನಾನು ಕೂಡಾ ಓರ್ವ ಪ್ರಗತಿಪರ ಕೃಷಿಕನಾಗಿದ್ದು, ಕೃಷಿಕರ ನೋವು ನಲಿವು ನನಗೆ ಗೊತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಯಾವುದೇ ಒಬ್ಬ ರೈತನಿಗೂ ಸಮಸ್ಯೆಯಾಗಬಾರದು. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಹೊತ್ತು ತಂದು ಮಾರಾಟ ಮಾಡಲು ಬಂದವರಿಗೆ ಯಾವುದೇ ಸುಂಕ ವಸೂಲಿ ಮಾಡಬಾರದು. ಜನರಿಗೂ ಯಾವುದೇ ಸಮಸ್ಯೆಯಾಗಬಾರದು. ಅಲ್ಲದೆ ಎಪಿಎಂಸಿ ಪ್ರಾಂಗಣದಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ರೈತರು ಮತ್ತು ಗ್ರಾಹಕರಿಗೆ ಗರಿಷ್ಠ ಮಟ್ಟದಲ್ಲಿ ಅನುಕೂಲಕ ಕಲ್ಪಿಸಿಕೊಡುವುದು ನನ್ನ ದ್ಯೇಯವಾಗಿದೆ ಎಂದರು.