ಕಾಸರಗೋಡು, ಜೂ 22 (Daijiworld News/MSP): ಮಣ್ಣು ಜರಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಕುಂಬಳೆ ಸೀತಾಂಗೋಳಿ ಸಮೀಪ ನಡೆದಿದೆ.

ಮೃತಪಟ್ಟವನನ್ನು ಪೆರ್ಲ ಕಾಟಕುಕ್ಕೆ ಯ ಹರ್ಷಿತ್ ಕುಮಾರ್ ( 38) ಎಂದು ಗುರುತಿಸಲಾಗಿದೆ ಮುಖಾರಿಕಂಡ ಕೋಡಿಮೂಲೆಯ ಖಾಸಗಿ ವ್ಯಕ್ತಿಯ ಹಿತ್ತಿಲಿನಲ್ಲಿ ಸುರಂಗ ಕಾಮಗಾರಿ ನಡೆಸುತ್ತಿದ್ದಾಗ ಘಟನೆ ನಡೆದಿದೆ.
ಹೊಸ ಮನೆಯೊಂದು ನಿರ್ಮಿಸುತ್ತಿದ್ದು, ಈ ಮನೆ ನಿರ್ಮಾಣದ ಗುತ್ತಿಗೆಯನ್ನು ಹರ್ಷಿತ್ ಕುಮಾರ್ ಪಡೆದಿದ್ದರು . ಸಮೀಪ ಇರುವ ಸುರಂಗದಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ಜೆ ಸಿ ಬಿ ಬಳಸಿ ನೀರು ಹಾದುಹೋಗಲು ಚರಂಡಿ ನಿರ್ಮಿಸುವ ಕಾಮಗಾರಿ ಕಾರ್ಯ ಬೆಳಿಗ್ಗೆಯಿಂದ ನಡೆಸಲಾಗುತ್ತಿತ್ತು . ಈ ನಡುವೆ ಸುರಂಗದ ಮೇಲಿಂದ ಮಣ್ಣು ಜರಿದು ಬಿದ್ದಿದ್ದು , ಅಲ್ಲಿದ್ದ ಉಳಿದ ಕಾರ್ಮಿಕರು ಓಡಿದ್ದರಿಂದ ಅಪಾಯ ತಪ್ಪಿದೆ.
ಹರ್ಷಿತ್ ಕುಮಾರ್ ಸುಮಾರು ಹದಿನೈದಡಿ ಮಣ್ಣಿನಡಿಯಲ್ಲಿ ಸಿಲುಕಿದ್ದು , ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು, ಸ್ಥಳೀಯರು ಸುಮಾರು ಎರಡು ಗಂಟೆಗಳ ಪ್ರಯತ್ನದ ಬಳಿಕ ಮೃತದೇಹವನ್ನು ಹೊರತೆಗೆದರು.
ಕುಂಬಳೆ ಪೊಲೀಸರು ಮಹಜರು ನಡೆಸಿದರು . ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ