ಕುಂದಾಪುರ, ಜೂ 22 (DaijiworldNews/SM): ಚಾಲಕನ ನಿಯಂತ್ರಣ ಕಳೆದುಕೊಂಡು ಬಾರ್ಕೂರು ಚೌಳಿಕೆರೆಗೆ ಕಾರು ಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ಬೆನ್ನಲ್ಲೇ ಇದೀಗ ಸ್ಥಳೀಯ ಗ್ರಾಮಪಂಚಾಯತ್ ಎಚ್ಚೆತ್ತುಕೊಂಡಿದೆ. ಘಟನೆ ನಡೆದ ಮರು ದಿನವೇ ಚೌಳಿಕೆರೆಗೆ ತಾತ್ಕಾಲಿಕ ತಡೆ ಬೇಲಿ ನಿರ್ಮಾಣ ಮಾಡಲಾಗಿದೆ.




ಕೆರೆಯ ಸುತ್ತಲೂ ಕಲ್ಲು ಕಂಬಗಳನ್ನು ಅಳವಡಿಸಿ ತಾತ್ಕಾಲಿಕ ಸುರಕ್ಷಾ ಟೆಪ್ ಕಟ್ಟುವ ಮೂಲಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಕ್ಷಣಕ್ಕೆ ಸ್ಪಂಧಿಸಿದ್ದಾರೆ. ಇನ್ನು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಲೊಕೋಪಯೋಗಿ ಇಲಾಖೆಗೆ ತಾಲ್ಲೂಕು ಪಂಚಾಯತ್ ಸಭೆಯಲ್ಲಿ ಮನವಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಇಲ್ಲಿಯ ತನಕ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ ಎಂದು ದೈಜಿವರ್ಲ್ಡ್ ಗೆ ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಡಿಸೋಜಾ ಮಾಹಿತಿ ನೀಡಿದ್ದಾರೆ.
ಹಲವು ಅಪಘಾತಗಳು ನಡೆಯುತ್ತಿವೆ:
ಇನ್ನು ಈ ಚೌಳಿಕೆರೆ ಇರುವುದು ರಸ್ತೆ ಪಕ್ಕದಲ್ಲೇ. ಈ ಭಾಗದಲ್ಲಿ ಅಪಾಯಕಾರಿಯಾದ ತಿರುವು ಕೂಡ ಇದೆ. ಆದರೆ, ಈ ಪ್ರದೇಶದಲ್ಲಿ ಹೊಸದಾಗಿ ಬರುವವರಿಗೆ ತಿರುವಿನ ಅರಿವು ಇರುವುದಿಲ್ಲ. ಇದರಿಂದಾಗಿ ಇಲ್ಲಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಈ ಹಿಂದೆ ಹಲವಾರು ಸಣ್ಣಪುಟ್ಟ ಘಟನೆಗಳು ನಡೆದಿವೆ. ಆದರೆ, ಈ ಭಾಗದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಮತ್ತೆ ಮತ್ತೆ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂಬುವುದು ಸ್ಥಳೀಯರ ಮಾತು.
ಶಾಶ್ವತ ಪರಿಹಾರವಾಗಬೇಕಿದೆ:
ಇನ್ನು ಈ ಭಾಗದಲ್ಲಿ ಅಪಾಯಕಾರಿಯಾದ ತಿರುವು ಇರುವುದು ವಾಹನ ಸವಾರರಿಗೆ ಗೋಚರವಾಗುವುದಿಲ್ಲ. ಇಲ್ಲಿ ರಸ್ತೆಯಲ್ಲಿ ಉಬ್ಬು ನಿರ್ಮಿಸಿಲ್ಲ. ಮಾತ್ರವಲ್ಲದೆ ಸಮರ್ಪಕ ಸೂಚನಾ ಫಲಕ ಕೂಡ ಅಳವಡಿಸಿಲ್ಲ. ಇದರಿಂದಾಗಿ ಅವಘಡಗಳು ನಡೆಯುತ್ತಿವೆ. ಈ ಭಾಗದಲ್ಲಿ ರಸ್ತೆಯಲ್ಲಿ ಉಬ್ಬುಗಳನ್ನು ಅಳವಡಿಸಬೇಕಾಗಿದೆ. ಅಲ್ಲದೆ, ಚೌಳಿಕೆರೆಯ ಸುತ್ತಲೂ ಶಾಶ್ವತವಾದ ಕಾಂಕ್ರಿಟ್ ತಡೆಗೋಡೆಯನ್ನು ನಿರ್ಮಾಣ ಮಾಡಬೇಕೆಂಬುವುದು ಸ್ಥಳೀಯರ ಒತ್ತಾಯ.
ವೈರಲ್ ಆಯ್ತು 15ರ ಬಾಲಕಿ ನಮನಾಳ ರಕ್ಷಣಾ ಕಾರ್ಯದ ವೀಡಿಯೋ:
ಪ್ರತಿ ಬಾರಿ ಅವಘಡಗಳು ಘಟಿಸಿದಾಗ ನಾವೇ ಸ್ಥಳಕ್ಕೆ ಮೊದಲು ದೌಡಾಯಿಸುತ್ತೇವೆ. ಅಪಘಾತಕ್ಕೊಳಗಾದವರನ್ನು ರಕ್ಷಿಸುವುದು ಮಾನವಧರ್ಮ. ಇದರಂತೆ ನಾವು ಪ್ರಾಣ ರಕ್ಷಣಾ ಕಾರ್ಯವನ್ನು ಮಾಡುತ್ತೇವೆ ಎಂಬುವುದು 15ರ ಹರೆಯದ ನಮನಾ ಎಂಬ ಬಾಲಕಿಯ ಮಾತುಗಳು.
ಇನ್ನು ರವಿವಾರದಂದು ಘಟನೆ ನಡೆದ ಬಳಿಕ ಕಾರನ್ನು ಮೇಲಕ್ಕೆತ್ತಲಾಗಿದ್ದು, ಈ ವೇಳೆ ಯುವಕ ಮೃತಪಟ್ಟಿದ್ದ. ಆದರೆ, ತೀವ್ರ ಅಸ್ವಸ್ಥಳಾಗಿದ್ದ ಯುವತಿಯ ಪ್ರಾಣ ರಕ್ಷಣೆಗೆ ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ಅದರಲ್ಲೂ, ಸ್ಥಳೀಯ 15 ವರ್ಷದ ಹುಡುಗಿ ನಮನಾಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಅಪಘಾತಗಳು, ಅವಘಡಗಳು ಸಂಭವಿಸಿದ ಸಂದರ್ಭ ಫೋಟೊ ತೆಗೆದುಕೊಳ್ಳುವವರ ನಡುವೆ ನಮನಾ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಮಾನವ ಧರ್ಮ ಶ್ರೇಷ್ಠ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ, ಅಸ್ವಸ್ತಗೊಂಡಿದ್ದ ಯುವತಿಗೆ ತನ್ನ ಕೈಲಾದಷ್ಟು ಸಾಹಸಪಟ್ಟು ಪ್ರಥಮ ಚಿಕಿತ್ಸೆ ನೀಡಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಲಕಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.
ದೈಜಿವರ್ಲ್ಡ್ ವಾಹಿನಿ ಬಿತ್ತರಿಸಿತ್ತು ಸಮಗ್ರ ವರದಿ:
ವೀಡಿಯೋ ವೈರಲ್ ಆಗುತ್ತಿದ್ದಂತೆ ಮೊದಲಿಗೆ ಆ ಬಾಲಕಿಯನ್ನು ಸಂಪರ್ಕಿಸಿ ಮಾತನಾಡಿಸಿದ ದೈಜಿವರ್ಲ್ಡ್ ವಾಹಿನಿ ಬಾಲಕಿಯಿಂದ ಪ್ರಾಣ ರಕ್ಷಣೆಯ ಮಾಹಿತಿ ಪಡೆದುಕೊಂಡಿದೆ. ನೇರಪ್ರಸಾರದ ವೇಳೆ ಬಾಲಕಿಯನ್ನು ಮಾತನಾಡಿಸಿ ಆ ಭಾಗದ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲುವ ಕಾರ್ಯ ಮಾಡಿದೆ. ಈ ವೇಳೆ ಸ್ವತಃ ಪ್ರಾಣ ರಕ್ಷಣೆ ಮಾಡಿದ ಹುಡುಗಿ ನಮನಾ ದೈಜಿವರ್ಲ್ಡ್ ಜತೆ ಅಳಲು ತೋಡಿಕೊಂಡಿದ್ದು, ಆ ಭಾಗದಲ್ಲಿ ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳುವಂತೆ ಮನವಿಮಾಡಿಕೊಂಡಿದ್ದಾಳೆ.