ಮಂಗಳೂರು, ಜೂ 22 (DaijiworldNews/SM): ಜೂನ್ 25ರಿಂದ ಜಿಲ್ಲೆಯಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಹಿನ್ನೆಲೆ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಎಸ್.ಎಸ್.ಎಲ್.ಸಿ. ಪರೀಕ್ಷಾ ಹಿನ್ನೆಲೆ ಖಾಸಗಿ ಸರ್ಕಾರಿ ಬಸ್ಸುಗಳು ಓಡಾಟಕ್ಕೆ ಸೂಚನೆ ನೀಡಿದರು. ಎಲ್ಲಾ ಗ್ರಾಮಾಂತರ ಪ್ರದೇಶದಲ್ಲಿ ಸ್ಥಗಿತವಾಗಿದ್ದ ಬಸ್ ಗಳು ಮತ್ತೆ ಪ್ರಾರಂಭಿಸುವಂತೆ ಖಾಸಗಿ ಬಸ್ ಮಾಲಿಕರಿಗೆ ಹಾಗೂ ಸರ್ಕಾರಿ ಬಸ್ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಅಲ್ಲದೆ, ಮಂಗಳವಾರದಿಂದಲೇ ಬಸ್ ಸಂಚಾರ ಆರಂಭಿಸುವಂತೆ ಸೂಚನೆ ನೀಡಿದರು.
ಗಡಿ ಭಾಗದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ:
ಜೂನ್ 25ರಿಂದ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಹಿನ್ನೆಲೆಯಲ್ಲಿ ಗಡಿ ಭಾಗದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಬರಲು ಅವಕಾಶ ನೀಡಲಾಗಿದೆ. ಇನ್ನೂ ಗಡಿ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಗಡಿಯಲ್ಲೂ ಇಲಾಖೆಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆ ಬರೆಯಲು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಇನ್ನು ದ ಕ.ದಲ್ಲಿ ಒಟ್ಟು 20835 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 1381 ವಿದ್ಯಾರ್ಥಿಗಳಿಗೆ ಹೊರ ಜಿಲ್ಲೆಯಲ್ಲೇ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿರುವ ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 95 ಪರೀಕ್ಷಾ ಕೇಂದ್ರಗಳನ್ನು ಸಿದ್ದಪಡಿಸಲಾಗಿದೆ. ಪ್ರತೀ ತರಗತಿಯಲ್ಲಿ 20 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1585 ಕೊಠಡಿ ಈಗಾಗಲೇ ಗುರುತಿಸಲಾಗಿದೆ. 102 ಕೊಠಡಿಗಳನ್ನು ವಿಶ್ರಾಂತಿ ಕೊಠಡಿಯಾಗಿ ಕಾಯ್ದಿರಿಸಲಾಗಿದೆ. ಜಿಲ್ಲಾಡಳಿತದಿಂದ ಕೋವಿಡ್ ಹಿನ್ನೆಲೆ ಸ್ಯಾನಿಟೈಸಿಂಗ್ ಕಾರ್ಯ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ಕೇರಳದಿಂದ ಆಗಮಿಸಲಿದ್ದಾರೆ 365 ವಿದ್ಯಾರ್ಥಿಗಳು:
ಪರೀಕ್ಷಾ ಮುಂಚಿತವಾಗಿ ಪರೀಕ್ಷಾ ಕೇಂದ್ರ ಪರಿಶೀಲಿಸಬಹುದು. ಪರೀಕ್ಷಾ ಕೇಂದ್ರ ವೀಕ್ಷಣೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಲಾಗಿದೆ. ಜೂ. 25 ರಂದು ಮುಂಜಾನೆ ೮ಕ್ಕೆ ಪರೀಕ್ಷಾ ಕೇಂದ್ರದಲ್ಲಿರಬೇಕು. ಪರೀಕ್ಷೆಗೆ ಕೇರಳದಿಂದ 365 ವಿದ್ಯಾರ್ಥಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ. ಕೇರಳ ಗಡಿ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ತಲಪಾಡಿಯಿಂದ ಸುಳ್ಯದ ಕೊಲ್ಚಾರ್ ವರೆಗೆ 39 ಗಡಿಗಳನ್ನು ಗುರುತಿಸಲಾಗಿದೆ. ಎಲ್ಲಾ ಗಡಿಯಲ್ಲೂ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾದೆ. ಜೂ.25ರಿಂದ ಮುಂಜಾನೆ 7ರಿಂದಲೇ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಲಿದ್ದಾರೆ. ಪ್ರತೀ ಪರೀಕ್ಷಾ ಕೇಂದ್ರದಲ್ಲಿ 6 ಜನ ಸಿಬ್ಬಂದಿಗಳಿದ್ದು ಒಟ್ಟು 855 ಸಿಬ್ಬಂದಿಗಳ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖಾ ಸಿಬ್ಬಂದಿ, ಸ್ಕೌಟ್ ಗೈಡ್, ಸೇರಿ ಪೊಲೀಸ್ ಸಿಬ್ಬಂದಿಗಳನ್ನು ಸುರಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.