ಮಂಗಳೂರು, ಏ 03: ಬಿಜೆಪಿ ತಮ್ಮ ಭಾವಚಿತ್ರವನ್ನು ದುರ್ಬಳಕೆ ಮಾಡಿರುವ ಆರೋಪ ಮಾಡಿರುವ ನಗರ ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಯೂನಿಯನ್ ಮಿನಿಸ್ಟರ್ ರವಿಶಂಕರ್ , ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಹಾಗೂ ಶೋಭಾ ಕರಂದ್ಲಾಜೆ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
ಏಪ್ರಿಲ್ 4 ರ ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಭಾನುವಾರ ಬಿಜೆಪಿ ಬಿಡುಗಡೆ ಮಾಡಿದ ಕಾಂಗ್ರೆಸ್ ವಿರುದ್ದದ ಆರೋಪ ಪಟ್ಟಿಯಲ್ಲಿ, ನನ್ನ ಪೋಟೊ ಹಾಕಿದ್ದು, ವಿನಾಃ ಕಾರಣ ಮಾನಸಿಕ ಹಿಂಸೆ ಆಗಿದ್ದು ಹೀಗಾಗಿ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದರು. ಬಿಜೆಪಿ ಚಾರ್ಜ್ ಶೀಟ್ ಪುಸ್ತಕದಲ್ಲಿ ಬೆಂಗಳೂರಿನಲ್ಲಿ ಸೀರೆ ಎಳೆದ ಪ್ರಕರಣದಲ್ಲಿ ನನ್ನ ಫೋಟೋ ಮತ್ತು ಹೆಸರನ್ನ ಬಳಸಲಾಗಿದ್ದು, ಬಿಜೆಪಿಯವರು ಸುಳ್ಳು ವಿಚಾರವನ್ನು ಹಾಕಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡಿದ್ದೇನೆ. ಇಂದು ನ್ಯಾಯಲಯದಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಯಡಿಯೂರಪ್ಪ, ಶೋಭ ಕರಂದ್ಲಾಜೆ ವಿರುದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುವೆ ಎಂದರು.