ಕುಂದಾಪುರ, ಜೂ 22 (DaijiworldNews/SM): ಬಾರ್ಕೂರು ಚೌಳಿಕೆರೆಗೆ ಜೂನ್ 21ರಂದು ಚಾಲಕನ್ ನಿಯಂತ್ರಣ ಕಳೆದುಕೊಂಡು ಕಾರು ಉರುಳಿ ಬಿದ್ದಿದ್ದು, ಘಟನೆಯಲ್ಲಿ ಯುವಕ, ಉದ್ಯಮಿ ಸಂತೋಷ್ ಶೆಟ್ಟು ಎಂಬಾತ ಮೃತಪಟ್ಟಿದ್ದಾನೆ. ಆದರೆ, ಘಟನೆ ನಡೆದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಯುವಕರು ಜೀವ ರಕ್ಷಣೆಯ ಕಾರ್ಯಕ್ಕೆ ಮುಂದಾಗಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಚೌಳಿಕೆರೆಗೆ ಧುಮುಕಿ ಕಾರಿನಲ್ಲಿದ್ದ ಇಬ್ಬರನ್ನು ಮೇಲಕ್ಕೆತ್ತಿದ್ದಾರೆ.
ಘಟನೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳೀಯ ಯುವಕರಾದ ಪ್ರದೀಪ್ ದೇವಾಡಿಗ, ಪ್ರವೀಣ್ ಪೂಜಾರಿ ಹಿಂದೆ ಮುಂದೆ ನೋಡದೆ ಕೆರೆಗೆ ಜಿಗಿದಿದ್ದಾರೆ. ಹಾಗೂ ಯುವತಿಗೆ ಮರು ಜೀವ ನೀಡಿದ್ದಾರೆ. ಆದರೆ, ದುರಾದೃಷ್ಟವಶಾತ್ ಉದ್ಯಮಿಯ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಯುವತಿ ಶ್ವೇತಾಳನ್ನು ಮೇಲಕ್ಕೆತ್ತಿದ ಯುವರು ಬಳಿಕ ಆಕೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಪ್ರಾಣದ ಹಂಗು ತೊರೆದು ಕೆರೆಗೆ ದುಮುಕಿ ಯುವತಿಯೊಬ್ಬಳಿಗೆ ಮರು ಜೀವ ನೀಡಿದ ಈ ಯುವಕರ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿತ್ತಿದೆ. ಇನ್ನು ಈ ಸಂದರ್ಭದಲ್ಲಿ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯ ನಿವಾಸಿಗಳು ಕೂಡ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದು, ಜೀವ ರಕ್ಷಣೆಗೆ ಪಣತೊಟ್ಟ ಎಲ್ಲರಿಗೂ ಸಲಾಂ.
ಪ್ರಾಣ ರಕ್ಷಕಿ ನಮನಾಳಿಗೆ ಕೋಟಿ ಪ್ರಣಾಮ:
ಇನ್ನು ಕೆರೆಯಿಂದ ಯುವತಿಯನ್ನು ಪ್ರದೀಪ್ ದೇವಾಡಿಗ, ಪ್ರವೀಣ್ ಪೂಜಾರಿ ಎಂಬ ಯುವಕರು ತಮ್ಮ ಪ್ರಾಣದ ಹಂಗು ತೊರೆದು ಮೇಲಕ್ಕೆತ್ತಿದ್ದಾರೆ. ಆದರೆ, ಮೇಲಕ್ಕೆತ್ತಿದ ಬಳಿಕ ಯುವತಿಗೆ ಪ್ರಾಣ ನೀಡಿದ್ದು 15ರ ಹರೆಯದ ಬಾಲಕಿ! 15 ವರ್ಷದ ನಮನಾ ಎಂಬ ಹುಡುಗಿ ಯುವತಿ ಶ್ವೇತಾಳಿಗಾಗಿ ತನ್ನಿಂದಾದ ಪ್ರಯತ್ನಗಳನ್ನು ನಡೆಸಿದ್ದಾಳೆ.
ನೀರಿನಿಂದ ಮೇಲಕ್ಕೆತ್ತಿದ ಬಳಿಕ ಯುವತಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕಿ ನಮನಾಳಿಗೆ ನಾಗರಿಕ ಸಮಾಜ ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತಿದೆ.