ಮಂಗಳೂರು,ಜೂ 23 (Daijiworld News/MSP): ಕೊವೀಡ್ ಲಕ್ಷಣವಿದ್ದ ವ್ಯಕ್ತಿ ಸಮೀಪವಿದ್ದ ಕಾರಣ ಸೋಂಕಿತ ವ್ಯಕ್ತಿಯ ನೆರೆಮನೆಯವರನ್ನು ಆರೋಗ್ಯ ಸೇತು ಆಪ್ ಎಚ್ಚರಿಕೆ ಸಂದೇಶ ನೀಡಿದ ಘಟನೆ ಎಕ್ಕೂರಿನಲ್ಲಿ ಸೋಮವಾರ ನಡೆದಿದೆ.
ಸೋಮವಾರ ಜಿಲ್ಲಾಡಳಿತ ಬಿಡುಗಡೆ ಮಾಡಿದ ವರದಿಯಲ್ಲಿ ಮಂಗಳೂರಿನ ಎಕ್ಕೂರು ನಿವಾಸಿ 27 ವರ್ಷದ ಯುವಕನಿಗೆ ಕೊರೊನಾ ದೃಢಪಟ್ಟಿತ್ತು. ಈತ ಇನ್ ಫ್ಲುಯೆನ್ಝಾ ಲೈಕ್ ಇಲ್ ನೆಸ್ (ಐ ಎಲ್ ಐ) ನಿಂದ ಬಳಲುತ್ತಿದ್ದ. ಆದರೆ ಜಿಲ್ಲಾಡಳಿತ ವರದಿ ಬರುವುದಕ್ಕೂ ಮುನ್ನವೇ ಆರೋಗ್ಯ ಸೇತು ಆಪ್ ಮೂಲಕ ಪಾಸಿಟಿವ್ ರೋಗಿ ಬಗ್ಗೆ ನೆರೆ ಮನೆಯವರಿಗೆ ಮಾಹಿತಿ ರವಾನೆಯಾಗಿತ್ತು. ನೆರೆಮನೆಯವರು ಯುವಕನನ್ನ ವಿಚಾರಿಸಿದಾಗ ಕೊರೊನಾ ದೃಢವಾದ ವಿಚಾರ ಬೆಳಕಿಗೆ ಬಂದಿತ್ತು. ಸೋಂಕು ದೃಢವಾದ ಹಿನ್ನಲೆಯಲ್ಲಿ ಆತನನ್ನು ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತ ನಗರದಲ್ಲಿ ಸ್ಥಳೀಯ ಮನೆಗಳಿಗೆ ತೆರಳಿ ಮೀನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬಂದರಿಗೆ ತೆರಳಿ ಮೀನು ತರುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿ ಪಾಸಿಟಿವ್ ರೋಗಿಗಳ ಸಂಪರ್ಕ ಉಂಟಾಗಿ ಸೋಂಕು ತಗುಲಿರುವ ಸಂಶಯ ಉಂಟಾಗಿದೆ. ಸಧ್ಯ ಆತನ ಜೊತೆ ಸಂಪರ್ಕವಿದ್ದವರ ಪತ್ತೆಗೆ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ.