ಕುಂದಾಪುರ, ಜೂ 23(DaijiworldNews/PY) : ದೊಡ್ಡ ರಾಜಕೀಯ ಪಕ್ಷದಲ್ಲಿ ರಾಜ್ಯ ಸಭಾ ಹಾಗೂ ವಿಧಾನಪರಿಷತ್ ಸದಸ್ಯರಂತಹ ಮಹತ್ವದ ಸ್ಥಾನಮಾನಗಳಿಗೆ ಸಾಕಷ್ಟು ಒತ್ತಡಗಳನ್ನು ಕಾಣುವ ಪ್ರಸ್ತುತ ಕಾಲ ಘಟ್ಟದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಸ್ಥಾನ ಮಾನವನ್ನು ನೀಡುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೂ ಸಾಮಾಜಿಕ ನ್ಯಾಯ ಬಿಜೆಪಿಯಲ್ಲಿ ದೊರಕುತ್ತದೆ ಎನ್ನುವುದು ಇತ್ತೀಚೆಗಿನ ವಿದ್ಯಮಾನಗಳಿಂದ ಜನಸಾಮಾನ್ಯರ ಗಮನಕ್ಕೆ ಬಂದಿದೆ ಎಂದು ರಾಜ್ಯ ಮುಜರಾಯಿ ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕುಂದಾಪುರ ಬಿಜೆಪಿ ಕಚೇರಿಗೆ ಮಂಗಳವಾರ ಭೇಟಿ ನೀಡಿದ ವೇಳೆ ಅವರು ಪಕ್ಷದ ಕಾರ್ಯ ಚಟುವಟಿಕೆಯ ಕುರಿತು ಮಾತನಾಡಿದರು.
ಕಾಶ್ಮೀರದಲ್ಲಿನ 370 ವಿಧಿಯನ್ನು ರದ್ದು ಮಾಡಿರುವುದು, ವಿರೋಧ ಪಕ್ಷಗಳು ಸಾರ್ವತ್ರಿಕ ಟೀಕೆ ಮಾಡಿ, ಪ್ರತಿಭಟನೆಯನ್ನು ಮಾಡಿ ಜನರನ್ನು ಎತ್ತಿಕಟ್ಟಿ ಪೌರತ್ವ ತಿದ್ದುಪಡಿ ಕಾಯಿದೆಗೆ ವಿರೋಧವನ್ನು ಮಾಡಿದ್ದರೂ, ಅದನ್ನು ಎದುರಿಸಿ ವಿಧೇಯಕ ತಂದಿರುವುದು, ಅಯೋಧ್ಯೆ ಸಮಸ್ಯೆ ಪರಿಹಾರವಾಗುದಿಲ್ಲ ಎನ್ನುವ ಕುಹಕ ಅಭಿಪ್ರಾಯಗಳಿಗೆ ವಿರುದ್ಧವಾಗಿ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಯಾರೊಬ್ಬರು ವಿರೋಧ ಮಾಡದಂತೆ ರಾಮ ಮಂದಿರ ಜನ್ಮ ಭೂಮಿ ವಿವಾದ ಬಗೆಹರಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗಿರುವುದರಿಂದ ದೇಶದ ಸಾರ್ವಭೌಮತೆ ಹೆಚ್ಚಾಗಿ ಆರ್ಥಿಕ ಶಕ್ತಿ ವೃದ್ಧಿಯಾಗುವಂತೆ ಮಾಡಿದೆ. ಹಿರಿಯರು ಕಂಡ ಕನಸುಗಳನ್ನು ನನಸು ಮಾಡುದ ದಿಸೆಯಲ್ಲಿ ಹೆಜ್ಜೆಯನ್ನು ಬಲವಾಗಿ ಊರುತ್ತಿರುವ ಮೋದಿ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜೆ, ಪಕ್ಷದ ಪ್ರಮುಖರಾದ ಸುರೇಶ್ ಶೆಟ್ಟಿ ಕಾಡೂರು, ಸುರೇಶ್ ಶೆಟ್ಟಿ, ಗುಣರತ್ನ ಪಿ, ಸದಾನಂದ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.