ಕುಂದಾಪುರ, ಜೂ 23(DaijiworldNews/PY) : ಕೊರೊನಾ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವ್ಯವಸ್ಥಿತವಾದ ಯೋಜನೆಗಳನ್ನು ರೂಪಿಸಿದೆ. ವಿಶ್ವದ್ಯಾಂತ ಸೋಂಕಿನ ಪ್ರಮಾಣಗಳು ನಿರೀಕ್ಷೆಯನ್ನು ಮೀರಿ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಹಾಗೂ ಪರಿಣಿತರ ಸಂಖ್ಯೆ ಸೋಂಕಿನ ಪ್ರಮಾಣ ಹೆಚ್ಚಾದಲ್ಲಿ ಏನು ಮಾಡಬೇಕು ಎಂದು ಸಲಹೆ ನೀಡುತ್ತಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ರಾಜ್ಯ ಮುಜರಾಯಿ ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಲ್ಲಿನ ಪುರಸಭೆಯ ಕಚೇರಿಯಲ್ಲಿ ಮಂಗಳವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಗಂಟಲು ದ್ರವ ಪರೀಕ್ಷೆಗಾಗಿ ಪ್ರತಿ ಜಿಲ್ಲೆಯಲ್ಲಿಯೂ ಲ್ಯಾಬ್ ತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಉಡುಪಿಯಲ್ಲಿ 4-5 ದಿನಗಳಲ್ಲಿ ಲ್ಯಾಬ್ ತನ್ನ ಕಾರ್ಯವನ್ನು ಆರಂಭಿಸಲಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅವಶ್ಯಕವಾಗಿರುವ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅಂಕೆ-ಸಂಖ್ಯೆಗಳು ಎಷ್ಟೇ ಹೆಚ್ಚಾದರೂ ಅದನ್ನು ನಿಭಾಯಿಸಲು ಸರ್ಕಾರ ಶಕ್ತವಾಗಿದೆ. ಕೊರೊನಾ ವೈರಸ್ ತಡೆಗಟ್ಟುವಲ್ಲಿ ದೇಶದಲ್ಲಿಯೇ ಮೊದಲ ರಾಜ್ಯವಾಗಿ ಕೆಲಸ ಮಾಡಿದ್ದ ಕರ್ನಾಟಕ ಸರ್ಕಾರ ಮುಂದೆಯೂ ಅದೇ ನಿಟ್ಟಿನಲ್ಲಿ ಕಾರ್ಯಾಚರಿಸಲಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಸರ್ಕಾರದ ಸಚಿವರ ಹೇಳಿಕೆಗಳಲ್ಲಿ ವ್ಯತ್ಯಾಸಗಳಿದ್ದರೂ, ಎಲ್ಲ ಸಚಿವರು ಒಟ್ಟಾಗಿ ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ. ಸ್ವತ: ಮುಖ್ಯಮಂತ್ರಿಗಳೇ ಪ್ರತಿ ದಿನ ಸಮಗ್ರ ಮಾಹಿತಿಯೊಂದಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿದ್ದಾರೆ. ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರಿಗೆ ಸೋಂಕು ಪತ್ತೆಯಾಗಿದ್ದ ಪ್ರಕರಣಗಳಿದ್ದರೂ, ಅವರೆಲ್ಲ ಗುಣಮುಖರಾಗಿದ್ದಾರೆ. ಮುಂದೆ ಈ ರೀತಿಯ ಪ್ರಕರಣಗಳು ಹೆಚ್ಚಾಗದಂತೆ ಎಚ್ಚರಿಕೆಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.
ಕುಂದಾಪುರ ಪುರಸಭೆಯನ್ನು ನಗರಸಭೆಯನ್ನಾಗಿಸುವ ಕುರಿತು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಜನಸಂಖ್ಯೆಯ ಅಂತರವಿದೆ ಎನ್ನುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಕೋಟೇಶ್ವರ, ಬೀಜಾಡಿ ಮುಂತಾದ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಹೊಸ ಪ್ರಾಸ್ತಾವನೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಆಟೋ ಚಾಲಕರಿಗೆ ನೀಡಿದ್ದ ಪರಿಹಾರದ ಪ್ಯಾಕೇಜ್ ಪಡೆಯಲು ಕಡ್ಡಾಯವಾಗಿ ಬ್ಯಾಡ್ಜ್ ಬೇಕು ಎನ್ನುವ ನಿಯಮಾವಳಿಯನ್ನು ಬದಲಾವಣೆ ಮಾಡಲಾಗಿದ್ದು, ಬ್ಯಾಡ್ಜ್ ಇಲ್ಲದೆ ಇರುವ ಚಾಲಕರಿಗೂ ಪ್ಯಾಕೇಜ್ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಕೆಲ ತಾಂತ್ರಿಕ ಸಮಸ್ಯೆಗಳಿದ್ದು ಅದು ಪರಿಹಾರವಾದ ಕೂಡಲೇ ಸಮಸ್ಯೆ ಸರಿಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.