ಮಂಗಳೂರು, ಏ 03 : ಇವನರ್ವ, ಇವನರ್ವ ಎನ್ನುವ ರಾಹುಲ್ ಹೇಳಿಕೆಯನ್ನು ಯಕ್ಷಗಾನದ ಹಾಸ್ಯದ ಸಂದರ್ಭದ ಸಂಭಾಷಣೆಯಲ್ಲಿ ಬಳಸಿರುವ ಕಟೀಲು ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಹಾಸ್ಯ ಕಲಾವಿದ ಪೂರ್ಣೇಶ್ ಅವರನ್ನು ಮೇಳದಿಂದ ಆಡಳಿತ ಮಂಡಳಿ ಒಂದು ವಾರಗಳ ಕಾಲ ಮೇಳದಿಂದ ಅಮಾನತು ಮಾಡಲಾಗಿದೆ. ಹೀಗಾಗಿ ಕರಾವಳಿಯಲ್ಲಿ ಯಕ್ಷಗಾನಕ್ಕೂ ನೀತಿಸಂಹಿತೆ ಬಿಸಿ ತಟ್ಟಿದೆ. ಮಾ. 24 ರಂದು ಕಾಸರಗೋಡು ಜಿಲ್ಲೆಯ ಮಾನ್ಯದಲ್ಲಿ ನಡೆದ ದೇವಿ ಮಹಾತ್ಮೆ ಪ್ರದರ್ಶನದಲ್ಲಿ ಕಲಾವಿದರು ಸಂಭಾಷಣೆ ಮಾಡುವಾಗ ಇವನರ್ವ ಇವನರ್ವ ಪದ ಬಳಕೆ ಮಾಡಿದ್ದು ಇದರ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಸುದ್ದಿಯಾಗುತ್ತಿದ್ದಂತೆ ಚುನಾವಣಾ ಆಯೋಗದ ಕಣ್ಣು ಯಕ್ಷಗಾನದ ಮೇಲೂ ಬಿದ್ದಿತ್ತು. ಹೀಗಾಗಿ ಕಟೀಲು ಮೇಳಕ್ಕೆ ಚುನಾವಣೆ ಆಯೋಗವೂ ಈ ಸಂಬಂಧ ನೋಟಿಸ್ ನೀಡಿತ್ತು. ಇದನ್ನು ಗಂಬೀರವಾಗಿ ಪರಿಗಣಿಸಿರುವ ಮೇಳ ಕಲಾವಿದನನ್ನು ಒಂದು ವಾರಗಳ ಕಾಲ ಅಮಾನತು ಮಾಡಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಕಲಾವಿದ ಪೂರ್ಣೇಶ್, ಎಪ್ರಿಲ್ 1ರಂದು ನಾನು ಸುಳ್ಯದ ಐವರ್ನಾಡಿನಲ್ಲಿ ನಡೆದ ಯಕ್ಷಗಾನದಲ್ಲಿ ಭಾಗವಹಿಸಿದ್ದೆ. ಆದರೆ ‘ಇವನರ್ವ’ ಪದದ ಸಂಭಾಷಣೆಯನ್ನು ತಾನು ಬಳಸಿದ್ದು ಮಾರ್ಚ್ 24ರಂದು ಕೇರಳದ ಮಾನ್ಯ ಎಂಬಲ್ಲಿ ನಡೆದ ಯಕ್ಷಗಾನದಲ್ಲಿ. ಅಂದರೆ ಈ ಕಾರ್ಯಕ್ರಮ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಮಾ.27ಕ್ಕಿಂತ ಮೊದಲು ನಡೆದಿದೆ. ಆದ್ದರಿಂದ ನೀತಿ ಸಂಹಿತೆ ಉಲ್ಲಂಘನೆಯ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ ಎಂದಿದ್ದಾರೆ.