ಮಂಗಳೂರು, ಜೂ. 23 (DaijiworldNews/SM): ಮಂಗಳೂರು ನಗರದಲ್ಲಿ ದಿನ ಬೆಳಗಾಗುವ ಮುನ್ನವೇ ವ್ಯಾಪಾರ ವಹಿವಾಟು ಪೂರ್ಣಗೊಳಿಸುತ್ತಿದ್ದ ಬಂದರು ಇದೀಗ ಬಂದ್ ಆಗಿದ್ದು, ಹೊರಗಿನಿಂದ ಯಾರಿಗೂ ಬಂದರು ಪ್ರವೇಶಕ್ಕೆ ಅವಕಾಶವಿಲ್ಲ.
ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಶಂಕೆ ಹಿನ್ನೆಲೆಯಲ್ಲಿ ಮೀನುಗಾರರೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಬಂದರಿನಲ್ಲಿರುವ ಮೀನುಗಾರರೇ ಸೇರಿಕೊಂಡು ದಕ್ಕೆ ಬಂದ್ ಮಾಡಿದ್ದಾರೆ.
ಸೂರ್ಯೋದಯದ ಮುನ್ನವೇ ನಗರದಲ್ಲಿರುವ ಬಂದರಿನಿಂದ ಜಿಲ್ಲೆಯ ವಿವಿಧ ಭಾಗಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ಮೀನು ರವಾನೆಯಾಗುತ್ತಿತ್ತು. ಹೊರ ರಾಜ್ಯದಿಂದಲೂ ಮೀನಿನ ವಾಹನಗಳು ದಕ್ಕೆಗೆ ಆಗಮಿಸಿ ಮೀನಿನೊಂದಿಗೆ ತೆರಳುತ್ತಿವೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರವಿಲ್ಲದೆ ಬಂದರಿನಲ್ಲಿ ವ್ಯವಹಾರ ನಡೆಯುತ್ತಿತ್ತು. ಇದರಿಂದಾಗಿ ಮತ್ತಷ್ಟು ಜನರಿಗೆ ಸೋಂಕು ಹರಡುವ ಭೀತಿ ಎದುರಾಗಿದೆ.
ಈ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರೇ ಬಂದರನ್ನು ಬಂದ್ ಮಾಡಿದ್ದಾರೆ. ಸದ್ಯ ಉಂಟಾಗಿರುವ ಶಂಕೆ ದೂರವಾಗುವ ತನಕ ಬಂದ್ ಮುಂದುವರೆಯಲಿದೆ. ವ್ಯವಹಾರದ ಬಗ್ಗೆ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ.