ಮಂಗಳೂರು, ಜೂ 24(Daijiworld News/MSP): ಕೊರೊನಾ ವೈರಸ್ ಪೀಡಿತರು ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದ್ದು ಇದಕ್ಕಾಗಿ ಚಿಕಿತ್ಸಾ ದರಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದಲ್ಲೂ ರಾಜ್ಯ ಸರ್ಕಾರ 30 ಆಸ್ಪತ್ರೆಗಳನ್ನು ಗುರುತಿಸಿದೆ. ಇವುಗಳಲ್ಲಿ ಈಗಾಗಲೇ 12 ಆಸ್ಪತ್ರೆಗಳು ಸರ್ಕಾರದ ಕೊರೀಕೆಗೆ ತಕ್ಷಣವೇ ಸ್ಪಂದಿಸಿ ಕೋವಿಡ್ 19 ರೋಗಿಗಳ ಚಿಕಿತ್ಸೆ ನೀಡುವ ಭರವಸೆ ನೀಡಿವೆ.
ಕೊವೀಡ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಎಲ್ಲಾ ವರ್ಗದವರು ಚಿಕಿತ್ಸೆ ಪಡೆಯಲೆಂದು ಸರ್ಕಾರವೇ ಚಿಕಿತ್ಸಾ ದರಪಟ್ಟಿ ಸಿದ್ದಗೊಳಿಸಿದೆ. ಅಲ್ಲದೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಿಸುವ ಉದ್ದೇಶ ಸರಕಾರದ್ದಾಗಿದ್ದು ಇದಕ್ಕಾಗಿ ರಾಜ್ಯದಲ್ಲಿ ಒಟ್ಟು 483 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆ.
ದ. ಕ ಜಿಲ್ಲೆಯಲ್ಲೂ ೩೦ ಆಸ್ಪತ್ರೆ ಗುರುತಿಸಲಾಗಿದ್ದು ಈ ಪೈಕಿ 12 ಆಸ್ಪತ್ರೆಗಳು ತಕ್ಷಣವೇ ಸ್ಪಂದಿಸಿದ್ದರೆ 18 ಆಸ್ಪತ್ರೆಗಳ ಮುಖ್ಯಸ್ಥರು ಸಮಯಾವಕಾಶ ಕೇಳಿದ್ದಾರೆ ಎಂಬ ಮಾಹಿತಿ ದೊರಕಿದೆ
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿಯೂ ಸರಕಾರ ನಿಗದಿ ಪಡಿಸಿದ ದರದಲ್ಲಿಯೇ ಚಿಕಿತ್ಸೆ ಸಿಗುತ್ತದೆ. ಆದರೆ ನೇರವಾಗಿ ತೆರಳಿದರೆ ಕೊಂಚ ಹೆಚ್ಚು ಹಾಗೂ ಆಯಾ ಜಿಲ್ಲೆಗಳ ಆರೋಗ್ಯ ಇಲಾಖೆಯ ಶಿಫಾರಸಿನೊಂದಿಗೆ ತೆರಳಿದರೆ ಚಿಕಿತ್ಸಾ ಶುಲ್ಕ ಕಡಿಮೆಯಾಗುತ್ತದೆ. ಆದರೆ ಆರೋಗ್ಯ ವಿಮೆ ಹೊಂದಿರುವವರಿಗೆ ಈ ದರ ಅನ್ವಯವಾಗುವುದಿಲ್ಲ.