ಮಂಗಳೂರು ಏ.4: ಕಟೀಲು ಮೇಳದ ವಿವಾದ ಮತ್ತೆ ಭುಗಿಲೆದ್ದಿದೆ. ಐದು ತಿಂಗಳ ಹಿಂದೆ ಕಟೀಲು 5 ನೇ ಮೇಳದ ಉಚ್ಚಾಟಿತ ಕಲಾವಿದರನ್ನು ಮತ್ತೆ ಮೇಳಕ್ಕೆ ಸೇರ್ಪಡೆ ಮಾಡಬೇಕು ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡುವುದಾಗಿ ಕಲಾವಿದರ ಪರವಾಗಿ ಬಿರುವೆರ್ ಕುಡ್ಲ ಸಂಘಟನೆ ತಿಳಿಸಿದೆ. ಈ ಬಗ್ಗೆ ಏ 4 ರ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಬಿರುವರೆ ಕುಡ್ಲ ಸಂಘಟನೆಯ ನಿತೇಶ್ ಮಾರನ ಹಳ್ಳಿ, ಕಟೀಲು ಮೇಳದಲ್ಲಿ ಕಳೆದ 25 ವರ್ಷಗಳಿಂದ ಹಿಮ್ಮೇಳ ಮುಮ್ಮೇಳ ರಂಗದಲ್ಲಿ ಪಾತ್ರದಾರಿಗಳಾಗಿ ಸೇವೆ ಸಲ್ಲಿದ ಎಂಟು ಕಲಾವಿದರನ್ನು ಕ್ಷುಲಕ ಕಾರಣಕ್ಕಾಗಿ ಉಚ್ಚಾಟಿಸಿದ್ದಾರೆ. ಅವರ ಪರವಾಗಿ ನಮ್ಮ ಹೋರಾಟ, ಒಂದು ವೇಳೆ ತಿಂಗಳ ಒಳಗಾಗಿ ಕಲಾವಿದರನ್ನ ಮತ್ತೆ ಮೇಳಕ್ಕೆ ಸೇರ್ಪಡೆಗೊಳಿಸದಿದ್ದಲ್ಲಿ , ಕಾನೂನು ಹೋರಾಟದ ಮಾಡುವ ಎಚ್ಚರಿಕೆ ನೀಡಿದರು.
ಈ ಹಿಂದೆ 5 ನೇ ಮೇಳದ ಪ್ರಧಾನ ಭಾಗವತರನ್ನ ವರ್ಗಾಯಿಸಲು ಪ್ರಸ್ತಾಪಿಸಲಾಗಿತ್ತು. ಹೀಗಾಗಿ ಕಲಾವಿದರು ಮನವಿ ಸಲ್ಲಿಸಲು ಹೋಗಿದ್ದರು,ಆದರೆ ಭೇಟಿಗೆ ಅವಕಾಶ ನೀಡಲಿಲ್ಲ.ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮೇಳದಲ್ಲಿ ಅಶಿಸ್ತಿನ ಕಾರಣ ಹೇಳಿ ಏಕಾಏಕಿ ಮೇಳದ 8 ಮಂದಿ ಕಲಾವಿದರನ್ನ ಉಚ್ಚಾಟಿಸಲಾಗಿತ್ತು. ಕಲಾವಿದರು ಆಡಳಿತ ಮಂಡಳಿಯಲ್ಲಿ ಕ್ಷಮೆ ಕೇಳಲು ಮುಂದಾಗಿದ್ದರೂ, 25 ವರ್ಷಗಳಿಂದ ಸೇವೆ ಸಲ್ಲಿಸಿದ ಕಲಾವಿದರನ್ನು ಉಚ್ಚಾಟನೆ ಮಾಡಿದ್ದರು. ಕಲಾವಿದರ ಮನವಿ ಸ್ವೀಕರಿಸದೇ ಕಟೀಲು ಮೇಳದ ಯಜಮಾನ ದೇವಿಪ್ರಸಾದ್ ಶೆಟ್ಟಿ ಕಲಾವಿದರನ್ನು ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದರು. ಮೇಳದಲ್ಲಿ ಯಜಮಾನಿಕೆ ಧೋರಣೆ ಇದ್ದು, ಕಲಾವಿದರ ಮೇಲೆ ದಬ್ಭಾಳಿಕೆ ನಡೆಸಿದ್ದಾರೆ. ಕಟೀಲು ಮೇಳದ ಯಜಮಾನರಿಗೆ 5 ಲಕ್ಷದ ವ್ಯವಹಾರವಿದ್ದರೂ ಕಲಾವಿದರಿಗೆ ಅಲ್ಪ ಸಂಬಳ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿರುವೆರ್ ಕುಡ್ಲ ಸಂಘಟನೆಯ ವಿದ್ಯಾ ರಾಕೇಶ್ , ಉಜಿರೆ ನಾರಾಯಣ , ಶಿವ ಶಂಕರ್ , ಮಹಾಬಲ ರೈ , ರಾಕೇಶ್ ರೈ, ರವೀಶ್ ಕುಂಬಳೆ , ಪ್ರಶಾಂತ್ ರೈ , ಗೋವಿಂದ್ ನಾಯ್ಕ, ಗುರು ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.