ಉಡುಪಿ, ಜೂ 24(Daijiworld News/MSP): ಕೊರೊನಾ ಸೋಂಕಿತರ ಪ್ರಾಥಮಿಕ, ಸೆಕೆಂಡರಿ ಸಂಪರ್ಕ ಬಂದ ವಿಚಾರ ತಿಳಿದು ಅದನ್ನು ಮುಚ್ಚಿಟ್ಟರೆ ಅವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ " ಜಿಲ್ಲೆಯಲ್ಲಿ ಸ್ಥಳೀಯವಾಗಿರುವ ಕೊವೀಡ್ ಪಾಸಿಟಿವ್ ಬಂದಿರುವಂತಹ ವ್ಯಕ್ತಿಯ ಪ್ರಯಾಣದ ಮಾಹಿತಿಯನ್ನು ಕಲೆ ಹಾಕಿ ಕೊರೊನಾ ಹರಡದಂತೆ ಶ್ರಮಿಸಲಾಗುತ್ತಿದೆ. ಹೀಗಾಗಿ ಯಾರಾದರೂ ಕೊವೀಡ್ ಸೋಂಕಿತರ ಪ್ರಾಥಮಿಕ, ಸೆಕೆಂಡರಿ ಸಂಪರ್ಕ ಬಗ್ಗೆ ಸ್ಪಷ್ಟವಾಗಿ ಹೇಳಿದರೆ, ಕೊರೊನ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಸಂಪರ್ಕಕ್ಕೆ ಬಂದ ವಿಚಾರ ತಿಳಿದು ಅದನ್ನು ಯಾವುದೇ ಕಾರಣಕ್ಕೂ ಮುಚ್ಚಿಡಬಾರದು. ಒಂದು ವೇಳೆ ಮುಚ್ಚಿಟ್ಟರೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.
"ಕೊವಿಡ್ ಪಾಸಿಟಿವ್ ಬಂದ ಲ್ಯಾಬ್ ಟೆಕ್ನಿಶಿಯನ್ ಮುಂಬೈ ಯಿಂದ ಬಂದವರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಅವರ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ " ಎಂದರು.
ಇನ್ನು ಜಿಲ್ಲೆಗೆ ಪ್ರತಿನಿತ್ಯ ಮಹಾರಾಷ್ಟ್ರದಿಂದ 200-250 ಮಂದಿ ರೈಲು ಹಾಗೂ ಖಾಸಗಿ ವಾಹನಗಳ ಮೂಲಕ ಆಗಮಿಸುತ್ತಿದ್ದಾರೆ. ಇವರೆಲ್ಲರನ್ನೂ ಕೂಡ ಹೋಮ್ ಕ್ವಾರಂಟೇನ್ನಲ್ಲಿ ಇರಿಸಿ ಇವರಲ್ಲಿ ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿ, ಮಕ್ಕಳನ್ನು ಕೊವೀಡ್ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.