ಮಣಿಪಾಲ, ಜೂ24 (DaijiworldNews/MB) : ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಣಿಪಾಲದ ಆಟೋ ಚಾಲಕರೊಬ್ಬರು ನವೀನವಾದ ರೀತಿಯಲ್ಲಿ ತಮ್ಮ ಆಟೋದಲ್ಲಿ ಬದಲಾವಣೆ ತಂದಿದ್ದು ಇದೀಗ ಸಾರ್ವಜನಿಕರಿಂದ ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿದ್ದಾರೆ.
ಮಣಿಪಾಲದ ನಿವಾಸಿಯಾಗಿರುವ ಆಟೋ ಡ್ರೈವರ್ 55 ವರ್ಷದ ಬಶೀರ್ ಅವರು, ಮಣಿಪಾಲದ ರಾಜೀವ ನಗರದಲ್ಲಿ ಆಟೋ ಚಲಾಯಿಸುತ್ತಿದ್ದು ಪ್ರಯಾಣಿಕರು ತನ್ನ ಆಟೋ ಹತ್ತುವ ಮೊದಲು ಸುರಕ್ಷತೆಯ ದೃಷ್ಟಿಯಿಂದ ಕೈ ತೊಳೆದುಕೊಳ್ಳದಾದ ವ್ಯವಸ್ಥೆಯನ್ನು ತನ್ನ ಆಟೋದಲ್ಲಿಯೇ ಅಳವಡಿಸಿದ್ದಾರೆ.
ಈ ಹಿಂದೆ 25 ವರ್ಷಗಳ ಕಾಲ ಸೌದಿಯಲ್ಲಿ ಗ್ಯಾರೇಜ್ ನಡೆಸುತ್ತಿದ್ದ ಬಶೀರ್ ಅವರು 2 ವರ್ಷಗಳ ಹಿಂದೆ ಭಾರತಕ್ಕೆ ವಾಪಾಸ್ ಆಗಿದ್ದರು. ಈಗ ತನ್ನ ಅನುಭವವನ್ನು ಬಳಸಿ ತನ್ನ ಆಟೋ ರಿಕ್ಷಾದಲ್ಲಿ ನವೀಕರಿಸಿರುವ ಅವರು, ಆಟೋದಲ್ಲಿ ವಾಟರ್ ಪೈಪ್, ಆರು ಲೀಟರ್ ನೀರಿನ ಟ್ಯಾಂಕ್, ಸ್ಯಾನಿಟೈಜರ್ ಅಳವಡಿಸಿದ್ದು ಹಾಗೆಯೇ ಚಾಲಕ ಮತ್ತು ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೂರಬಹುದಾದ ರೀತಿಯಲ್ಲಿ ಬದಲಾಯಿಸಿದ್ದಾರೆ.
ಈ ಬಗ್ಗೆ ದಾಯ್ಜಿವಲ್ಡ್ ಜೊತೆ ಮಾತನಾಡಿದ ಬಶೀರ್ ಅವರು, ನಾನು ಸೌದಿಯಲ್ಲಿ ಗ್ಯಾರೇಜ್ ನಡೆಸುತ್ತಿದ್ದಾಗ ವಾಹನಗಳನ್ನು ನವೀಕರಿಸುವ ಬಗ್ಗೆ ನನಗೆ ಒಂದು ಆಲೋಚನೆ ಇತ್ತು. ಇದೀಗ ಕೊರೊನಾ ಕಾರಣದಿಂದಾಗಿ ನನ್ನ ಆಟೋವನ್ನು ಬದಲಾವಣೆ ಮಾಡುವ ಹೊಸ ಯೋಚನೆ ಉಂಟಾಗಿದೆ. ಇದರಿಂದಾಗಿ ಜನರಿಗೆ ಸುರಕ್ಷಿತ ಮನೋಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ.
"ಪ್ರಯಾಣಿಕರ ಸುರಕ್ಷತೆ ಬಹಳ ಮುಖ್ಯ, ಅದನ್ನು ಗಮನದಲ್ಲಿಟ್ಟುಕೊಂಡು ನೀರಿನ ಟ್ಯಾಪ್, ನೀರಿನ ವಾಟರ್ ಟ್ಯಾಂಕ್, ಸ್ಯಾನಿಟೈಜರ್ ಅನ್ನು ಅಳವಡಿಸಿದ್ದೇನೆ. ಪ್ರಯಾಣಿಕರು ಆಟೋ ಹತ್ತುವ ಮೊದಲು ಕೈ ತೊಳೆದು ಸ್ಯಾನಿಟೈಜರ್ ಹಾಕಬೇಕು. ಹಾಗೆಯೇ ಮಾಸ್ಕ್ ಧರಿಸುವುದು ಕೂಡಾ ಕಡ್ಡಾಯವಾಗಿದೆ. ನಾನು ಒಬ್ಬರು ಅಥವಾ ಇಬ್ಬರು ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡುತ್ತೇನೆ ಎಂದು ತಿಳಿಸಿದ್ದಾರೆ.