ಉಳ್ಳಾಲ, ಜೂ. 25 (DaijiworldNews/MB) : ಉಳ್ಳಾಲ ಪೊಲೀಸ್ ಠಾಣೆಯ ಎಸ್ಐ ಸಹಿತ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಉಳ್ಳಾಲ ಪೊಲೀಸ್ ಠಾಣೆಯ ಎಸ್ಐಗೆ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಠಾಣೆಯನ್ನು ಖಾಸಗಿ ಸ್ಥಳಕ್ಕೆ ಸ್ಥಳಾಂತರ ಮಾಡಿದ ಬಳಿಕ ಸೀಲ್ಡೌನ್ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.
ಉಳ್ಳಾಲದ ಖಾಸಗಿ ಆಸ್ಪತ್ರೆಗೆ ಉಳ್ಳಾಲದ ಆಝಾದ್ ನಗರದ 57 ವರ್ಷದ ಮಹಿಳೆ ಅನಾರೋಗ್ಯದ ಕಾರಣದಿಂದ ದಾಖಲಾಗಿದ್ದು 2 ದಿನಗಳ ಬಳಿಕ ಬೇರೆ ಆಸ್ಪತ್ರೆಗೆ ದಾಖಲಾಗಿದ್ದರು. ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ಬುಧವಾರ ಮಹಿಳೆ ಸಾವನ್ನಪ್ಪಿದ್ದಾರೆ.
ಈ ಮಹಿಳೆಯ ಮನೆಯ ಸಮೀಪದ 60 ವರ್ಷದ ಮಹಿಳೆಗೂ ಕೊರೊನಾ ಸೋಂಕು ದೃಢಪಟ್ಟಿದ್ದು ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳ್ಳಾಲದ ಎಸ್ಐಗೆ ಬುಧವಾರ ಸೋಂಕು ದೃಢಪಟ್ಟಿದ್ದು ಅವರು ಕೆಲ ದಿನಗಳ ಹಿಂದೆ ತಲಪಾಡಿ ಚೆಕ್ಪೋಸ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜ್ವರ ಬಂದ ಕಾರಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಬುಧವಾರ ಬೆಳಗ್ಗೆ ದಾಖಲಾಗಿ ಗಂಟಲ ದ್ರವ ಪರೀಕ್ಷೆ ಮಾಡಿಸಿದ್ದು ಸಂಜೆ ವೇಳೆ ಕೊರೊನಾ ದೃಢಪಟ್ಟಿದೆ. ಆಸ್ಪತ್ರೆಗೆ ಕಮಿಷನರ್ ಹರ್ಷ ಭೇಟಿ ನೀಡಿದ್ದು ಪೊಲೀಸ್ ಠಾಣೆಯನ್ನು ಕೆಲದಿನಗಳ ಕಾಲ ಸೀಲ್ಡೌನ್ಗೆ ಸಿದ್ಧತೆ ನಡೆಸುವಂತೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಈ ಬಗ್ಗೆ ದಾಯ್ಜಿವಲ್ಡ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ವ್ಯವಸ್ಥಾಪಕರು, ಆಸ್ಪತ್ರೆಯ ವ್ಯವಸ್ಥಾಪಕರು, ಉಳ್ಳಾಲದ ಖಾಸಗಿ ಆಸ್ಪತ್ರೆ ಸೀಲ್ಡೌನ್ ಆಗಿಲ್ಲ. ಮೃತ ಮಹಿಳೆ 2 ದಿನ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿದ್ದರು. ಬಳಿಕ ಬೇರೆ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕಿತ ಮಹಿಳೆಯ ಸಂಪರ್ಕಕ್ಕೆ ಬಂದ ಸಿಬ್ಬಂದಿಗಳು ಕ್ವಾರಂಟೈನ್ ಮಾಡಲಾಗಿದ್ದು ಅವರ ಪರೀಕ್ಷಾ ವರದಿ ಬರದೇ ಆಸ್ಪತ್ರೆಯಲ್ಲಿ ಒಳರೋಗಿ ಹಾಗೂ ಹೊರರೋಗಿ ವಿಭಾಗಗಳಲ್ಲಿ ಚಿಕಿತ್ಸಾ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.