ಮಂಗಳೂರು, ಜೂ. 25 (DaijiworldNews/MB) : ಮಂಗಳೂರು ಮತ್ತು ಉಡುಪಿಯಲ್ಲಿ ಜೂನ್ 25 ರ ಗುರುವಾರ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದೆ.
ಮಂಗಳೂರಿನಲ್ಲಿ 95 ಪರೀಕ್ಷಾ ಕೇಂದ್ರಗಳಲ್ಲಿ 30,835 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಕೇರಳದ 395 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ದಕ್ಷಿಣ ಕನ್ನಡದಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 1,318 ವಿದ್ಯಾರ್ಥಿಗಳು ಪರೀಕ್ಷೆಯನ್ನು ಇತರ ಜಿಲ್ಲಾ ಪರೀಕ್ಷಾ ಕೇಂದ್ರದಲ್ಲಿ ಬರೆಯಲು ನಿರ್ಧರಿಸಿದ್ದಾರೆ. ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಬರಲು ಬಸ್ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲದೆ, ಮಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಬಳಸಲು 632 ಥರ್ಮಲ್ ಸ್ಕ್ಯಾನರ್ಗಳನ್ನು ಬಳಸಲಾಗುತ್ತಿದೆ. ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಎಲ್ಲಾ ಕೇಂದ್ರಗಳನ್ನು ಸ್ವಚ್ಛಗೊಳಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು 14,039 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಜಿಲ್ಲಾ ಪಂಚಾಯತ್ ಸಿಇಒ ಪ್ರೀತಿ ಗೆಹ್ಲೋಟ್, ಈ ಆರು ದಿನಗಳ ಪರೀಕ್ಷೆಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ನಡೆಸಲು ನಾವು ಒಂದು ತಿಂಗಳಿನಿಂದ ನಿರಂತರವಾಗಿ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದೇವೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಗೆ ಸ್ಯಾನಿಟೈಜರ್ ನೀಡಲಾಗುತ್ತದೆ ಮತ್ತು ಥರ್ಮಲ್ ಸ್ಕ್ಯಾನಿಂಗ್ ಅನ್ನು ಮಾಡಲಾಗುತ್ತದೆ. ಹಾಗೆಯೇ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ತರಗತಿಯಲ್ಲಿರುವ ಶಿಕ್ಷಕರಿಗೂ ಥರ್ಮಲ್ ಸ್ಕ್ಯಾನಿಂಗ್ ಅನ್ನು ಮಾಡಲಾಗುತ್ತದೆ. ಉಡುಪಿಯ 599 ವಿದ್ಯಾರ್ಥಿಗಳು ಹೊರಗಿನ ಜಿಲ್ಲೆಗಳಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಯಾವುದೇ ವಿದ್ಯಾರ್ಥಿಗಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದರೆ, ಅವರು ಒಂದೇ ಕೋಣೆಗಳಲ್ಲಿ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ಬರೆಯುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಭೇಟಿ ನೀಡಿದ್ದು ಎಲ್ಲಾ ವ್ಯವಸ್ಥೆಗಳನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಇರುವ ರಾಮಕೃಷ್ಣ ಪ್ರೌಢ ಶಾಲೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, 30 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಎಲ್ಲಾ ಕಡೆ ಯಾವುದೇ ಅವ್ಯವಸ್ಥೆ ಆಗದಂತೆ ನೋಡಿಕಂಡಿದ್ದೇವೆ. ಕಾಸರಗೋಡಿನಿಂದ 367 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದಾರೆ. ಸುರಕ್ಷಿತವಾಗಿ ಅವರನ್ನು ಮರಳಿ ಮನೆಗೆ ತಲುಪಿಸುತ್ತೇವೆ. ಕಾಸರಗೋಡಿನಿಂದ ಯಾರೂ ಪರೀಕ್ಷೆಗೆ ಗೈರು ಹಾಜರಾಗಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲಾರಿಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗೆಯೇ ಸಾಮಾಜಿಕ ಅಂತರವನ್ನು ಗಮನದಲ್ಲಿರಿಸಿ ಪರೀಕ್ಷಾ ಕೇಂದ್ರಗಳನ್ನು ಸಿದ್ಧಗೊಳಿಸಲಾಗಿದೆ.
ಇನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ವಿದ್ಯಾರ್ಥಿಗಳಿಗೆ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಗಳು ಒಂದು ಪರೀಕ್ಷಾ ಕೇಂದ್ರದಲ್ಲಿ ಬಳಸಲು ಹಾಗೂ ಇನ್ನೊಂದು ಅಗತ್ಯವಿದ್ದಲ್ಲಿ ಬಳಸಲು ಎರಡು ಮಾಸ್ಕ್ಗಳನ್ನು ವಿತರಿಸುವುದು ಕಂಡು ಬಂದಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಮುನ್ನ ಹಾಗೂ ಪರೀಕ್ಷೆಯ ಬಳಿಕ ಸ್ಯಾನಿಟೈಝರ್ ಬಳಸಲಾಗುತ್ತದೆ. ಹಾಗೆಯೇ ಪ್ರತಿ ಶಾಲೆಗೆ ಇಬ್ಬರು ಪೊಲೀಸರು, ಇಬ್ಬರು ಸ್ಕೌಟ್ & ಗೈಡ್ಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.