ಬೆಳ್ತಂಗಡಿ, ಜೂ 25(DaijiworldNews/PY) : ಚಾರ್ಮಾಡಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕರು ಠಾಣಾ ಸಿಬ್ಬಂದಿಗಳೊಂದಿಗೆ ತಪಾಸಣೆ ಮಾಡುತ್ತಿದ್ದ ಸಂದರ್ಭ ಅಕ್ರಮವಾಗಿ ಜಾನುವಾರು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಲಾರಿ ಚಾಲಕ ನರೇಶ್, ಮೊಹಮ್ಮದ್ ಅಜರುದ್ದೀನ್ ಬಿನ್ ಅಬ್ದುಲ್ ರಹಿಮಾನ್ ಹಾಗೂ ಮಹಮ್ಮದ್ ಹಫೀಜ್ ಬಿನ್ ಮಹಮ್ಮದ್ ಇಬ್ರಾಹಿಂ ಎಂದು ತಿಳಿದುಬಂದಿದೆ.
ಜೂನ್ 25ರಂದು ಬೆಳಿಗ್ಗೆ ಸುಮಾರು 7.00 ಗಂಟೆಯ ಸಮಯಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಿಮಿತ್ತ ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದ ಲಾರಿಯನ್ನು ನಿಲ್ಲಿಸಿ ತಪಾಸಣೆ ಮಾಡಿದ ಸಂದರ್ಭ ವಾಹನದಲ್ಲಿ ಜಾನುವಾರುಗಳ ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲಾತಿಗಳನ್ನು ಹೊಂದದೇ ಸಾಧಾರಣ ಗಾತ್ರದ 5 ಎಮ್ಮೆ, 4 ಹಸುಗಳು ಮತ್ತು 2 ಸಣ್ಣ ಕರು ಸೇರಿ ಒಟ್ಟು 11 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದಾಗಿ ಕಂಡು ಬಂದಿದೆ.
ಈ ಸಂದರ್ಭ ಪೊಲೀಸರು ಲಾರಿ ಚಾಲಕ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದು, ಲಾರಿ ಸಹಿತ ಜಾನುವಾರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋ ಹತ್ಯೆ ನಿಷೇದ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.