ಮಂಗಳೂರು, ಜೂ 25 (DaijiworldNews/SM): ಗುರುವಾರ ದ.ಕ. ಜಿಲ್ಲೆಗೆ ಬಿಗ್ ರಿಲೀಫ್ ಸಿಕ್ಕಿದ್ದು, ಒಂದೇ ದಿನ ಜಿಲ್ಲೆಯಲ್ಲಿ 43 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಬಿಡುಗಡೆಯಾದ ಬಹುತೇಕರು 40 ವರ್ಷದೊಳಗಿನವರಾಗಿದ್ದಾರೆ. ಸದ್ಯ ದ.ಕ. ಜಿಲ್ಲೆಯಲ್ಲಿ 140 ಮಂದಿ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 344 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಇಲ್ಲಿಯ ತನಕ ಜಿಲ್ಲೆಯಲ್ಲಿ ಒಟ್ಟು 484 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ ಕೊರೊನಾ ಸೊಂಕಿನಿಂದಾಗಿ ಇಲ್ಲಿಯ ತನಕ 10 ಮಂದಿ ಸಾವನಪ್ಪಿದ್ದಾರೆ.
ಗುರುವಾರದಂದು 203 ಮಂದಿಯ ಕೊರೊನಾ ಪರೀಕ್ಷಾ ವರದಿ ಲಭ್ಯವಾಗಿದ್ದು, ಈ ಪೈಕಿ 174 ಮಂದಿಯ ವರದಿ ನೆಗೆಟಿವ್ ಆಗಿದೆ. ಈ ನಡುವೆ 225 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ. 37 ಮಂದಿಯನ್ನು ನಿಗಾದಲ್ಲಿಡಲಾಗಿದೆ.