ಕಾಸರಗೋಡು, ಜೂ 25 (DaijiworldNews/SM): ಕರ್ನಾಟಕ-ಕೇರಳ ಗಡಿಯ ತಲಪಾಡಿ ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಪ್ರಯಾಣಕ್ಕೆ ಅನುಮತಿ ನೀಡದಿರಲು ಕಾಸರಗೋಡು ಜಿಲ್ಲಾಡಳಿತ ತೀರ್ಮಾನಿಸಿದೆ. ಸರಕಾರದ ತೀರ್ಮಾನದಂತೆ ತಲಪಾಡಿ ಗಡಿ ಮೂಲಕ ಮಾತ್ರ ನಿಬಂಧನೆ ಹಾಗೂ ಮಾನದಂಡದಂತೆ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.
ಈ ಕುರಿತು ಜಿಲ್ಲಾ ಮಟ್ಟದ ಕೊರೊನಾ ಸಲಹಾ ಸಮಿತಿ ಸಭೆ ಚರ್ಚಿಸಿದ್ದು, ಎಣ್ಮಕಜೆ ಮತ್ತು ವರ್ಕಾಡಿ ಗ್ರಾಮ ಪಂಚಾಯತ್ ನ ವಿವಿಧ ಗಡಿ ರಸ್ತೆ ತೆರೆಯುವ ಬಗ್ಗೆ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಈಗ ತಲಪಾಡಿ ಮೂಲಕ ಮಾತ್ರ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಉಳಿದ ಎಲ್ಲಾ ರಸ್ತೆಗಳಿಗೆ ಚೆಕ್ ಪೋಸ್ಟ್ ಸಜ್ಜು ಗೊಳಿಸಲು ಅಗತ್ಯವಾದ ಪೊಲೀಸ್, ಅರೋಗ್ಯ ಇಲಾಖೆ ಸಿಬ್ಬಂದಿಗಳ ಕೊರತೆಯಿಂದ ತೆರವುಗೊಳಿಸಲು ಸಾಧ್ಯವಿಲ್ಲ. ಸಿಬ್ಬಂದಿಗಳು ಲಭಿಸಿದ ಕೂಡಲೇ ಸರಕಾರದ ತೀರ್ಮಾನದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿಕರನ್ನು ಕರೆತರಲು ಎರಡು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಸ್ವಂತ ವಾಹನ ಅಥವಾ ಟ್ಯಾಕ್ಸಿಯಲ್ಲಿ ಸಂಚರಿಸಲು ಆಸಕ್ತಿ ಇಲ್ಲದವರು ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಕರೆತರಲಾಗುವುದು. ಈ ಸಂದರ್ಭದಲ್ಲಿ ಅವರು ಎಲ್ಲಾ ನಿಬಂಧನೆಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.